Advertisement
ಪಕ್ಷ ಸೇರಲು ಮುಂದಾಗುವವರೆಲ್ಲರನ್ನೂ ಬರಮಾಡಿಕೊಂಡು ಚುನಾವಣೆ ಸಂದರ್ಭದಲ್ಲಿ ಗೊಂದಲ ಮೂಡಿಸುವ ಬದಲು ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬಳಿಕವೇ ಪಕ್ಷ ಗೆಲ್ಲಲು ಸಾಧ್ಯವಿಲ್ಲ ಎಂಬ ಕಡೆ ಅನ್ಯ ಪಕ್ಷಗಳ ಪ್ರಮುಖರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂಬ ಸ್ಪಷ್ಟ ನಿರ್ದೇಶನ ಪಕ್ಷದ ವರಿಷ್ಠ ಮಂಡಳಿಯಿಂದ ರಾಜ್ಯ ನಾಯಕರಿಗೆ ಬಂದಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಅನ್ಯ ಪಕ್ಷಗಳ ಮುಖಂಡರು ಬಿಜೆಪಿ ಸೇರಲು ಬಯಸಿ ಪಕ್ಷದ ಪ್ರಮುಖರನ್ನು ಸಂಪರ್ಕಿಸಿದರೆ ಅಂಥವರನ್ನು ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಕಳುಹಿಸಿಕೊಡಬೇಕು. ಯಡಿಯೂರಪ್ಪ ಅವರು ಪಕ್ಷದ ವರಿಷ್ಠ ಮಂಡಳಿಯೊಂದಿಗೆ ಚರ್ಚಿಸಿ ಬೇರೆ ಯವರನ್ನು ಪಕ್ಷ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಬಿಜೆಪಿ ಮುಖಂಡರಿಗೆ ವರಿಷ್ಠರಿಂದ ಸೂಚನೆ ಬಂದಿದೆ.
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಎರಡು ಸಮೀಕ್ಷೆಗಳನ್ನು ಮಾಡಲಾಗಿದ್ದು, ಇದರ ಜತೆಗೆ ಆರ್‌ಎಸ್‌ಎಸ್ ಮುಖಂಡರಿಂದಲೂ ಒಂದು ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಅವರ ತಂಡ ಪಡೆದುಕೊಂಡಿದೆ. ಈ ಪಟ್ಟಿಗಳನ್ನು ಪರಿಶೀಲಿಸಿ ಗೆಲ್ಲಬಹುದು ಎನ್ನಲಾದ 120 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು. ಮಾ. 10ರ ಬಳಿಕ ಅಮಿತ್ ಶಾ ಅವರು ರಾಜ್ಯದಲ್ಲಿ ಹೆಚ್ಚು ದಿನ ಕಳೆಯಲಿದ್ದಾರೆ. ಇವರೊಂದಿಗೆ ಅವರ ಚುನಾವಣಾ ತಂಡದ ಸದಸ್ಯರೂ ರಾಜ್ಯಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯ ಸಮೀಕ್ಷಾ ವರದಿ ಕುರಿತು ಚರ್ಚಿಸಲಾಗುವುದು. ಗೆಲ್ಲಲಾಗದ ಕ್ಷೇತ್ರಗಳಲ್ಲಿ ಆಪರೇಷನ್ ಕಮಲ
ಮೊದಲ ಪಟ್ಟಿ ಸಿದ್ಧಗೊಳ್ಳುವ ವೇಳೆಗೆ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಕ್ಷೇತ್ರ ಗಳಲ್ಲಿ ಉಳಿದ ಪಕ್ಷಗಳಲ್ಲಿರುವ ಪ್ರಮುಖರು ಗೆಲ್ಲಬಹುದು ಎಂದಾದರೆ ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಮತ್ತು ಆ ವೇಳೆ ಪಕ್ಷದ ಸ್ಥಳೀಯ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆದಿವೆ.