Advertisement
ಈ ಬೆಳವಣಿಗೆ ಬಗ್ಗೆ ಬಿಜೆಪಿ ಹೈಕಮಾಂಡ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಗೊತ್ತಾಗಿದೆ. ಆ ಹಿನ್ನೆಲೆಯಲ್ಲಿ ಮುರಳೀಧರ ರಾವ್ ಶುಕ್ರವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಬಿಟ್ಟು ಹೈದರಾಬಾದ್‌ಗೆ ತೆರಳಿದರು. ಭೇಟಿ ಕುರಿತು ಪಕ್ಷದಲ್ಲೂ ಅಪಸ್ವರ ಕೇಳಿಬಂದಿದ್ದು, ರಾಜ್ಯ ನಾಯಕರೂ ಈ ವಿಚಾರಕ್ಕೆ “ಇತಿಶ್ರೀ’ ಹಾಡಲು ಯತ್ನಿಸಿದರು.
Related Articles
Advertisement
ವಿಧಾನಸೌಧದಲ್ಲಿ ಗುರುವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಕೆಲ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಅಣುಕು ಪ್ರದರ್ಶನ ನಡೆಸಿ ಸಂಭ್ರಮಿಸಿದ್ದರು. ಆದರೆ ಆ ಸಭೆ ಮುಗಿದು ಕೆಲವೇ ಗಂಟೆ ಕಳೆಯುವುದರೊಳಗೆ ಲೆಕ್ಕಾಚಾರಗಳು ತುಸು ಏರುಪೇರಾಗಿದ್ದವು.
ಸಚಿವರ ಭೇಟಿ : ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಮುರಳೀಧರರಾವ್, ಈಶ್ವರಪ್ಪ ಅವರು ಕುಮಾರಕೃಪಾ ಅತಿಥಿ ಗೃಹದಲ್ಲಿ ಭೇಟಿಯಾಗಿದ್ದರು. ಜೆಡಿಎಸ್‌ನ ಒಂದು ಗುಂಪಿನೊಂದಿಗೆ ಬಿಜೆಪಿ ಬೆಂಬಲಿಸಿ ಸರ್ಕಾರ ರಚಿಸುವುದು, ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘನೆಯಾಗದಷ್ಟು ಸಂಖ್ಯೆಯ ಜೆಡಿಎಸ್ ಶಾಸಕರೇ ಬಿಜೆಪಿ ಬೆಂಬಲಿಸುವ ಮೂಲಕ ಸುರಕ್ಷಿತ ಹೆಜ್ಜೆ ಇಡುವ ಬಗ್ಗೆ ಚರ್ಚೆಯಾದರೂ ಮಾತುಕತೆ ಫಲಪ್ರದವಾಗಲಿಲ್ಲ ಎಂಬ ಮಾತುಗಳಿವೆ.
ಈ ಹಿಂದೆ 20-20 ಸರ್ಕಾರ ರಚನೆಯಾದಾಗ 20 ತಿಂಗಳ ಅಧಿಕಾರ ಮುಗಿಸಿದ ಬಳಿಕ ಕುಮಾರಸ್ವಾಮಿಯವರು ಅಧಿಕಾರ ಹಸ್ತಾಂತರಿಸದೆ ವಿಧಾನಸಭೆ ವಿಸರ್ಜಿಸಿದ್ದರಿಂದ ಕೆರಳಿದ ಬಿ.ಎಸ್.ಯಡಿಯೂರಪ್ಪ ಅವರು ಇದೇ ವಿಚಾರವನ್ನಿಟ್ಟುಕೊಂಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿದ್ದರು. ಹೀಗಿರುವಾಗ ಗುರುವಾರದ ಮಾತುಕತೆಯು ಬಿಜೆಪಿ ಮತ್ತೆ ಜೆಡಿಎಸ್‌ನೊಂದಿಗೆ ಸರ್ಕಾರ ರಚಿಸುವ ಪ್ರಯತ್ನ ನಡೆಸಿದೆಯೇ ಎಂಬ ಅನುಮಾನಕ್ಕೆ ಕಾರಣವಾಗಿತ್ತು.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದ ಬಿಜೆಪಿಯು ರಾಜ್ಯಪಾಲರಿಗೂ ಮನವಿ ಸಲ್ಲಿಸಿತ್ತು. ಹೀಗಿರುವಾಗ ಮತ್ತೆ ಜೆಡಿಎಸ್‌ನೊಂದಿಗೆ ಮಾತುಕತೆ ನಡೆದಿದೆ ಎನ್ನಲಾದ ಬೆಳವಣಿಗೆ ಕಮಲ ಪಕ್ಷದ ವರ್ಚಸ್ಸನ್ನು ತುಸು ಮಂಕಾಗಿಸಿದೆ.
ಕಾರ್ಯತಂತ್ರ?: ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿದ್ದ ಕಾಂಗ್ರೆಸ್, ಜೆಡಿಎಸ್‌ನ ಅತೃಪ್ತ ಶಾಸಕರು ಆಡಳಿತ ಪಕ್ಷಗಳ ಯಾವ ನಾಯಕರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್‌ನ ಕೆಲ ನಾಯಕರು ಕಾರ್ಯತಂತ್ರವೊಂದನ್ನು ಹೆಣೆದಿದ್ದರು. ಬದಲಾದ ಸನ್ನಿವೇಶದಲ್ಲಿ ಜೆಡಿಎಸ್, ಬಿಜೆಪಿಯನ್ನೂ ಬೆಂಬಲಿಸಿ ಸರ್ಕಾರದ ಭಾಗವಾಗಿರಲಿದೆ ಎಂಬ ಸಂದೇಶ ರವಾನಿಸುವ ಉದ್ದೇಶದಿಂದ ಸಚಿವ ಸಾ.ರಾ. ಮಹೇಶ್ ಈ ಮಾತುಕತೆಗೆ ಮುಂದಾಗಿದ್ದರು.
ವರಿಷ್ಠರಿಂದ ತರಾಟೆ: ಘಮ ಘಮ ಎನ್ನುವ ರುಚಿಕರ ಪಾಯಸ ಸಿದ್ಧವಾಗುತ್ತಿತ್ತು. ಇನ್ನೇನು ಕುಡಿಯಬೇಕೆನ್ನುವಷ್ಟರಲ್ಲಿ ಪಾಯಸದಲ್ಲಿ ಬಾಲ ಅಲ್ಲಾಡಿಸಿದರು ಎಂಬ ಮಾತಿನಂತೆ ಘಟನೆಯೊಂದು ನಡೆದಿದೆ. ಈ ಬಗ್ಗೆ ಪಕ್ಷದ ವರಿಷ್ಠರು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಈ ಮಾತುಕತೆ ಅಗತ್ಯವಿರಲಿಲ್ಲ. ಈ ಸಂಬಂಧ ವರಿಷ್ಠರು ಸಂಬಂಧಪಟ್ಟವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
* ಎಂ. ಕೀರ್ತಿಪ್ರಸಾದ್