Advertisement
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಯರ್ ಸ್ಥಾನಕ್ಕಾಗಿ 3.5 ಕೋಟಿ ರೂ. ನೀಡಿರುವ ಸದಸ್ಯ ಆಸೀಫ್ ಕಾಂಗ್ರೆಸ್‌ನವರು, ಮೇಯರ್ ಸ್ಥಾನ ಕೊಡಿಸುವುದಾಗಿ ಹಣ ಪಡೆದವರು ಕಾಂಗ್ರೆಸ್ ಮುಖಂಡರು. ಅವರವರೇ ಆಂತರಿಕ ಒಳಬೇಗುದಿಯಿಂದ ಕಚ್ಚಾಡಿಕೊಂಡು ಮೇಯರ್ ಸ್ಥಾನ ಕೈತಪ್ಪಿದ್ದರಿಂದ ಹಣ ವಾಪಸ್ ನೀಡುವಂತೆ ಆಸೀಫ್ ಕೌಲ್‌ಬಜಾರ್ ಠಾಣೆಯಲ್ಲಿ ದೂರು ನೀಡಿದ್ದಾರೆ ಹೊರತು, ಅದಕ್ಕೆ ಬಿಜೆಪಿಯವರು ಕುಮ್ಮಕ್ಕು ನೀಡಿದ್ದಾರೆ, ಸಚಿವ ಶ್ರೀರಾಮುಲು ಬೆಂಬಲ ನೀಡಿದ್ದಾರೆ ಎಂದು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಬಿಜೆಪಿಯವರಿಗೆ ಸಂಬಂಧವೇ ಇಲ್ಲ. ವಿನಾಕಾರಣ ನಮ್ಮನ್ನು ಎಳೆದು ತರಲಾಗುತ್ತಿದೆ ಎಂದ ಶಾಸಕ ಸೋಮಶೇಖರರೆಡ್ಡಿ, ಆಸೀಫ್‌ನಿಂದ ಪಡೆದ 3.5 ಕೋಟಿ ರೂ. ವಾಪಸ್ ನೀಡಲೆಂದು ಹಾಲಿ ಮೇಯರ್ ಅವರಿಂದಲೂ 3.5 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ನವರಿಂದಲೇ ಕೇಳಿಬರುತ್ತಿವೆ ಆ ಬಗ್ಗೆಯೂ ತನಿಖೆಯಾಗಲಿ ಎಂದು ತಿಳಿಸಿದರು.
Related Articles
Advertisement
ಸಚಿವ ಶ್ರೀರಾಮುಲು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಕೆಎಂಆರ್‌ಇಸಿಯಿಂದ 25 ಸಾವಿರ ಕೋಟಿ ರೂ. ಬಿಡುಗಡೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದಕ್ಕಾಗಿ ನ್ಯಾ| ಸುದರ್ಶನರೆಡ್ಡಿ ಅವರನ್ನು ನೇಮಿಸಿದೆ. ಶೀಘ್ರ ಕಚೇರಿ ತೆರೆದು ಕೆಲಸ ಆರಂಭಿಸಲಿದ್ದಾರೆ. ಹಿಂದೆ ಐದು ವರ್ಷ ಕಾಂಗ್ರೆಸ್ ಆಡಳಿತಾವಧಿ ಯಲ್ಲಿ ಇದನ್ನು ಏಕೆ ಮಾಡಲಿಲ್ಲ. ಎಸ್ ಎನ್‌ಪೇಟೆ ಮೇಲ್ಸೇತುವೆ ಪೂರ್ಣಗೊಳಿಸಲಾಗಲಿಲ್ಲ. ಡಿಎಂಎಫ್ ಅನುದಾನವನ್ನು ಬಳಸಿಕೊಳ್ಳಲಾಗಿಲ್ಲ. ಈ ಅಭಿವೃದ್ಧಿಯನ್ನು ಸಹಿಸಲಾಗದೆ, ಇದರಿಂದ ಮುಂದಿನ ಚುನಾವಣೆಯಲ್ಲಿ ಸಚಿವ ರಾಮುಲು, ಗ್ರಾಮೀಣ ಕ್ಷೇತ್ರಕ್ಕೆ ಬಂದು, ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಸಂಕಷ್ಟ ತಂದೊಡ್ಡುವರೇ ಎಂಬ ಭಯದಿಂದ ಕಾಂಗ್ರೆಸ್ ನವರು ಈ ರೀತಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲಿ ಎಂದು ಸವಾಲ್ ಎಸೆದರು.
ನಮ್ಮ ಅದೃಷ್ಟ
ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಬದಲಿಸಿ, ರಾಮುಲು ಅವರಿಗೆ ನೀಡುವಂತೆ ನಾನು ಕೇಳುತ್ತಿದ್ದೆ. ಅದರಂತೆ ರಾಮುಲುಗೆ ಜಿಲ್ಲೆಯ ಉಸ್ತುವಾರಿ ಲಭಿಸಿದ್ದು, ಅದೇ ಸಮಯಕ್ಕೆ ಸಹೋದರ ಮಾಜಿ ಸಚಿವ ಜಿ.ಜನಾರ್ಧನರೆಡ್ಡಿಯವರು ಬಳ್ಳಾರಿಗೆ ಬಂದಿರುವುದು ನಮ್ಮ ಅದೃಷ್ಟ. ಬಳ್ಳಾರಿ ಅಭಿವೃದ್ಧಿ ಬಗ್ಗೆ ಅವರು ಕನಸು ಹೊಂದಿದ್ದರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಫಾಯಿ ಕರ್ಮಚಾರಿ ನಿಗಮಾಧ್ಯಕ್ಷ ಎಚ್.ಹನಮಂತಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ, ಜಿ. ವಿರೂಪಾಕ್ಷಗೌಡ, ರಾಬಕೊ ನಿರ್ದೇಶಕ ವೀರಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಪಾಲನ್ನ, ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಹನುಮಂತ ಗುಡಿಗಂಟೆ, ಹನುಮಂತ, ಮುಖಂಡರಾದ ಹೇಮಣ್ಣ, ವೆಂಕಟರಾಮರೆಡ್ಡಿ, ಸುರೇಂದ್ರ ಇತರರಿದ್ದರು.