ಮಡಿಕೇರಿ: ಆನೇಕಲ್ ಪುರಸಭೆಯ ಸದಸ್ಯರಾದ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಅವರ ಹತ್ಯಾ ಪ್ರಕರಣ ರಾಜಕೀಯ ಪ್ರೇರಿತ ದುಷ್ಕೃತ್ಯವಾಗಿದ್ದು, ಪ್ರಕರಣದ ಸತ್ಯಾಸತ್ಯತೆಯ ಕುರಿತು ಶೀಘ್ರ ತನಿಖೆ ನಡೆಸಿ ಹಂತಕರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.
ಬಿಜೆಪಿ ನೂತನ ಅಧ್ಯಕ್ಷ ಬಿ.ಬಿ. ಭಾರತೀಶ್ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳ ಪ್ರಮುಖರು ಮತ್ತು ಕಾರ್ಯಕರ್ತರು ಗುರುವಾರ ಬೆಳಗ್ಗೆ ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಘೋಷಣೆೆಗಳನ್ನು ಕೂಗಿ, ಹತ್ಯಾ ಪ್ರಕರಣದ ತನಿಖೆಗೆ ಆಗ್ರಹಿಸಿದರು.
ಈ ಸಂದರ್ಭ ಬಿ.ಬಿ. ಭಾರತೀಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೆಗೆ ಪ್ರವೀಣ್ ಪೂಜಾರಿಯಿಂದ ಹಿಡಿದು ಈಗಿನ ಶ್ರೀನಿವಾಸ್ ಪ್ರಸಾದ್ ವರೆಗೆ ಹಿಂದೂಪರ ಸಂಘಟನೆಗಳ ಹಲವು ಪ್ರಮುಖರು ಹತ್ಯೆಗೆ ಒಳಗಾಗಿದ್ದಾರೆ. ಇದಕ್ಕೆ ರಾಜ್ಯದ ಆಡಳಿತ ವ್ಯವಸ್ಥೆ, ಕಾನೂನು ವ್ಯವಸ್ಥೆ ಕುಸಿದಿರುವುದೆ ಪ್ರಮುಖ ಕಾರಣವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಹತ್ಯೆಯ ಹಿಂದೆ ಆಡಳಿತ ಪಕ್ಷದ ಕೆಲವು ಶಾಸಕರ ಕೈವಾಡವಿದೆ ಎಂದು ಆರೋಪಿಸಿದ ಬಿ.ಬಿ. ಭಾರತೀಶ್, ಇಂತಹ ಹತ್ಯಾ ಪ್ರಕರಣಗಳಿಗೆ ಗೃಹ ಇಲಾಖೆಯ ವೈಫಲ್ಯವೆ ಪ್ರಮುಖ ಕಾರಣವಾಗಿದೆ ಎಂದರು.
ಪ್ರತಿಭಟನೆಯ ಬಳಿಕ ಜಿಲ್ಲಾಡಳಿತಕ್ಕೆ ಬಿಜೆಪಿ ಪ್ರಮುಖರು ಮನವಿ ಸಲ್ಲಿಸಿ, ಶ್ರೀನಿವಾಸ್ ಪ್ರಸಾದ್ ಅವರ ಹತ್ಯೆ ರಾಜಕೀಯ ಪ್ರೇರಿತವೆನ್ನುವ ಅನುಮಾನಗಳು ಜನವಲಯದಲ್ಲಿ ಮೂಡಿದೆ. ಈ ಬಗ್ಗೆ ಶೀಘ್ರ ತನಿಖೆೆ ನಡೆಸಿ ಹಂತಕರನ್ನು ಬಂಧಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ಎಂ.ಬಿ. ದೇವಯ್ಯ, ಎಸ್.ಎನ್. ರಾಜಾರಾವ್, ತಳೂರು ಕಿಶೋರ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಯಮುನಾ ಚಂಗಪ್ಪ, ಸೋಮವಾರಪೇಟೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷರಾದ ನಳಿನಿ ಗಣೇಶ್, ಸುಮಾ ಸುದೀಪ್, ಕಾಂತಿ ಸತೀಶ್, ಕನ್ನಂಡ ಸಂಪತ್, ಜಿ.ಎಲ್. ನಾಗರಾಜ್, ರಾಬಿನ್ ದೇವಯ್ಯ, ನಾಪಂಡ ಕಾಳಪ್ಪ, ಸಜಿಲ್ ಕೃಷ್ಣನ್, ಕೊಮಾರಪ್ಪ, ಜೀವನ್, ಸತೀಶ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.