Advertisement

ದೇವಾಲಯಗಳ ಸ್ವಾಯತ್ತತೆಗೆ ಕೈ ಹಾಕಿದರೆ ಬಿಜೆಪಿ ಸರ್ಕಾರ ಭಸ್ಮವಾಗಲಿದೆ: ಡಿಕೆಶಿ ಎಚ್ಚರಿಕೆ

08:20 PM Dec 31, 2021 | Team Udayavani |

ಬೆಂಗಳೂರು: ರಾಜ್ಯದ ದೇವಾಲಯಗಳು ಜನರ ಆಸ್ತಿ. ಬಿಜೆಪಿ ಸರ್ಕಾರ ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರಿಗೆ ಹಸ್ತಾಂತರ ಮಾಡಲು ಮುಂದಾಗಿದೆ. ಇದು ಹಿಂದೂ ವಿರೋಧಿ ನೀತಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಆವರು, ಸರ್ಕಾರದ ಕ್ರಮವನ್ನು ರಾಜ್ಯದ ಜನ ಹಾಗೂ ದೇವರು ಕ್ಷಮಿಸುವುದಿಲ್ಲ. ಈ ನಿರ್ಧಾರದಿಂದ ಬಿಜೆಪಿ ಸರ್ಕಾರ ಸುಟ್ಟು ಭಸ್ಮವಾಗಲಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಈ ಕ್ರಮವು ಕಾಂಗ್ರೆಸ್‌ ಹಿಂದೂ ವಿರೋಧಿಯಲ್ಲ, ಬಿಜೆಪಿ ನಿಜವಾದ ಹಿಂದೂ ವಿರೋಧಿ ಎಂಬುದಕ್ಕೆ ಉದಾಹರಣೆ ಎಂದು ತಿಳಿಸಿದರು.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನು ಬುಡಮೇಲು ಮಾಡಲು ಸರಕಾರ ಹೊರಟಿದೆ. ಒಂದೆರಡು ದೇವಾಲಯಗಳು, ಮಠಗಳನ್ನು ಬಿಟ್ಟರೆ ಉಳಿದೆಲ್ಲವೂ ಸರ್ಕಾರದ ನಿಯಂತ್ರಣದಲ್ಲಿದೆ. ಎಲ್ಲ ದೇವಾಲಯಗಳಲ್ಲಿ ಜನರು ಕೋಟ್ಯತರ ರೂ.ಹುಂಡಿಗೆ ಹಾಕುತ್ತಾರೆ. ಇದನ್ನು ತಮ್ಮ ಕಾರ್ಯಕರ್ತರಿಗೆ ಹಂಚಲು ಬಿಜೆಪಿ ಸರ್ಕಾರ ಹೊರಟಿದೆ ಎಂದು ದೂರಿದರು.

ಇದನ್ನೂ ಓದಿ:ಸೆಪ್ಟೆಂಬರ್‌ ಒಳಗೆ ವಿಷ್ಣು  ಸ್ಮಾರಕ ಪೂರ್ಣ

Advertisement

ನಾವು ಕೂಡ ಹಿಂದೂಗಳು. ಹಿಂದೂ ಧರ್ಮ ಹಾಗೂ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟಿರುವವರು. ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಪರವಾದ ಒಂದೇ ಒಂದು ಯೋಜನೆಯನ್ನು ನೀಡಲಿಲ್ಲ. ನಮ್ಮ ಸರ್ಕಾರ ಕೊಟ್ಟ ಕಾರ್ಯಕ್ರಮಗಳು ಹಾಗೂ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ನಾವು ಅದಕ್ಕೆ ಸಿದ್ಧ ಎಂದು ಸವಾಲು ಹಾಕಿದರು.

ಈಗ ಚುನಾವಣೆಯಲ್ಲಿ ಸೋಲುತ್ತಿದ್ದೇವೆ ಎಂಬ ಕಾರಣಕ್ಕೆ ಇವರು ಗೋಹತ್ಯೆ, ಮತಾಂತರ ನಿಷೇಧ, ದೇವಾಲಯಗಳ ಸ್ವಾಯತ್ತತೆ ಕಾನೂನು ತರುತ್ತಿದ್ದಾರೆ. ಚುನಾವಣೆ ಸೋಲನ್ನು ಮರೆಮಾಚಲು, ಜನರನ್ನು ಭಾವನಾತ್ಮಕವಾಗಿ ಹಿಡಿದಿಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ದೇವಾಲಯಗಳನ್ನು ಭಕ್ತಾದಿಗಳಿಗೆ ನೀಡುತ್ತಿದ್ದೇವೆ ಎನ್ನುತ್ತಾರೆ. ಕಬ್ಟಾಳಮ್ಮ ದೇವಾಲಯದಲ್ಲಿ ಏನಾಗುತ್ತಿತ್ತು, ನಾನು ಅದರ ಜವಾಬ್ದಾರಿ ತೆಗೆದುಕೊಂಡ ಮೇಲೆ ಅಲ್ಲಿ ಎಷ್ಟು ಅಭಿವೃದ್ಧಿಯಾಗಿದೆ. ಬನಶಂಕರಿ ದೇವಾಲಯ, ಕಾಡು ಮಲ್ಲೇಶ್ವರ ದೇವಾಲಯಗಳು ಸರ್ಕಾರದ ನಿಯಂತ್ರಣದಲ್ಲಿವೆ. ಕಳೆದ ಬಾರಿ ಸಮಿತಿ ರಚಿಸಿದರು, ನಂತರ ಏನಾಯ್ತು ಎಂದು ಪ್ರಶ್ನಿಸಿದರು.

ರಾಜ್ಯದ ದೇವಾಲಯ ಹಾಗೂ ದೇವರುಗಳನ್ನು ಮಾರಲು ಹೋರಟಿರುವ ನೀವು ಎಂತಹ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದೀರಿ. ಮುಂದಿನ ತಿಂಗಳು 4 ರಂದು ನಾವು ಪಕ್ಷದ ನಾಯಕರ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿ ಒಮ್ಮತದ ನಿರ್ಧಾರಕ್ಕೆ ಬರುತ್ತೇವೆ.
– ಡಿ.ಕೆ.ಶಿವಕುಮಾರ್‌

ಸುಗ್ರೀವಾಜ್ಞೆ ತರಲು ವಿರೋಧ
ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿಶೇಷ ಟಾಸ್ಕ್ ಫೋರ್ಸ್‌ ರಚಿಸುತ್ತೇವೆ ಎಂದು ಹೇಳುತ್ತಾರೆ.ಅದು ಸಾಧ್ಯವಿಲ್ಲದ ಮಾತು, ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತರಲು ಮುಂದಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ರಾಜ್ಯದಲ್ಲಿ ಕಾನೂನು ಇದೆ. ಸರಕಾರದ ನಿಲುವಿನ ವಿರುದ್ಧ ಜನರ ಮುಂದೆ ಹೋಗಿ ಹೋರಾಡುತ್ತೇವೆ. ನಾವು ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ನಿರ್ಧಾರವನ್ನು ಹಿಂಪಡೆಯುತ್ತೇವೆ ಎಂದು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next