Advertisement

ಬಿಜೆಪಿ ಸರ್ಕಾರದಿಂದ ಜಹಗೀರದಾರರು, ಜಮೀನ್ದಾರಿ ಪದ್ದತಿ ಮತ್ತೆ ತರುವ ಪ್ರಯತ್ನ: ಸಿದ್ದರಾಮಯ್ಯ

05:25 PM Jul 16, 2020 | keerthan |

ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯವನ್ನು ಬಳಸಿಕೊಂಡು ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಈ ಮೂಲಕ ರೈತರ ಸರ್ವನಾಶಕ್ಕೆ ಅಂಕಿತ ಹಾಕಿದೆ. ಈ ದಿನ ಕರ್ನಾಟಕದ ಇತಿಹಾಸಲ್ಲಿ ಕರಾಳ ದಿನವಾಗಿ ಉಳಿಯಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭ ಬಳಸಿಕೊಂಡು ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶನ ಮಾಡಿದೆ. ಸುಗ್ರೀವಾಜ್ಞೆ ಹೊರಡಿಸಿದ ದಿನ ಕರ್ನಾಟಕಕ್ಕೆ ಕರಾಳವಾದ ದಿನವಾಗಿದೆ. ಈ ಸುಗ್ರಿವಾಜ್ಞೆಯು ರೈತರ, ಕೂಲಿ ಕಾರ್ಮಿಕರ, ಹಿಂದುಳಿದವರ ವಿರೋಧಿಯಾಗಿದೆ.

ರಾಜ್ಯದಲ್ಲಿ ಈ ಸಂಬಂಧ ಸುಮಾರು 13,814 ಪ್ರಕರಣಗಳು ಬಾಕಿ ಇದ್ದು, ಆದರೆ ಸುಗ್ರೀವಾಜ್ಞೆಯಿಂದ ಎಲ್ಲ ಪ್ರಕರಣಗಳು ವಜಾ ಆಗುತ್ತವೆ. 79ಎ, 79ಬಿ ರದ್ದತಿಯ ಹಿಂದೆ ಷಡ್ಯಂತ್ರ ಇದೆ ಎಂದು ಆರೋಪಿಸಿದರು.

ಬೆಂಗಳೂರು ಮತ್ತು ಗ್ರಾಮಾಂತರದಲ್ಲಿ ಹೆಚ್ಚು ಕೇಸ್ ಗಳು ದಾಖಲಾಗಿವೆ. ಬೆಂಗಳೂರು ಸುತ್ತಮುತ್ತ 45-50 ಸಾವಿರ ಕೋಟಿ ರೂಪಾಯಿ ಬೆಳೆ ಬಾಳುವ ಜಮೀನಿನ ಕೇಸ್ ಗಳು ವಜಾ ಮಾಡಿದ್ದಾರೆ. ಸೆಕ್ಷನ್ 63ಕ್ಕೆ ತಿದ್ದುಪಡಿ ತಂದು ಒಂದು ಕುಟುಂಬಕ್ಕೆ ಇದ್ದ 118 ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ? ರೈತರು ಅಷ್ಟು‌ ಜಮೀನು ತೆಗೆದುಕೊಳ್ತಾರಾ? ಇದರಿಂದ ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ. ಈ ಸರ್ಕಾರ ಇಡೀ ರೈತ ಸಮುದಾಯ ನಾಶ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.

ಮುಂದೆ ಎಲ್ಲರೂ ಕಾರ್ಪೋರೆಟ್ ಸಂಸ್ಥೆಗಳ ಬಾಗಿಲು ಕಾಯಬೇಕಾದ ಸ್ಥಿತಿ ಬರುತ್ತದೆ. ಬಂಡಾವಳಶಾಹಿಗಳು ಭೂಮಿ ತಗೊಂಡು ರಿಯಲ್ ಎಸ್ಟೇಟ್ ಮಾಡ್ತಾರೆ. ಇಡೀ ಸರ್ಕಾರವೇ ಹಗರಣದಲ್ಲಿ ಭಾಗಿಯಾಗಿದೆ. ಇದು ಗಣಿ ಹಗರಣಕ್ಕಿಂತ ದೊಡ್ಡದು. ಈ ನಡೆಯನ್ನು ಕಾಂಗ್ರೆಸ್ ಪಕ್ಷವು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸುತ್ತದೆ ಎಂದರು.

Advertisement

ಜಹಗೀರದಾರರು, ಜಮೀನ್ದಾರಿ ಪದ್ದತಿ ಮತ್ತೆ ತರುವ ಪ್ರಯತ್ನವು ಬಿಜೆಪಿ ಸರ್ಕಾರದಿಂದ ನಡೆಯುತ್ತಿದೆ. ಅಂಬಾನಿ, ಅದಾನಿ ಕೃಷಿ ಮಾಡುತ್ತಾರಾ? ರಿಯಲ್ ಎಸ್ಟೇಟ್ ಮಾಡುತ್ತಾರೆ. ಈ ತಿದ್ದುಪಡಿಯಿಂದ ಸಾಮಾನ್ಯ ರೈತರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು.

ಯಡಿಯೂರಪ್ಪ ಹಸಿರುಶಾಲು ಹಾಕಿಕೊಂಡು ಪ್ರಮಾಣ ವಚನ ತೆಗೆದುಕೊಂಡು ರೈತರ ಭೂಮಿಯನ್ನು ಕೊಡುತಿದ್ದಾರೆ. ಇದು ರೈತ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರುವ ಅಗತ್ಯತೆ ಏನಿತ್ತು? ಕೋವಿಡ್ ಸೋಂಕಿತ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ, ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿ ಇವೆ. ಈ ಬಗ್ಗೆ ಹೋರಾಟ ಮಾಡುವುದನ್ನ ಬಿಟ್ಟು ಕಳ್ಳದಾರಿಯಲ್ಲಿ ಹೊರಟಿದ್ದಾರೆ. ಲಾಕ್ ಡೌನ್ ವೇಳೆಯನ್ನು ಉಪಯೋಗಿಸಿ ಕೊಂಡಿದ್ದಾರೆ ಎಂದರು.

ಕೋವಿಡ್ 19 ಕುರಿತು ಲೆಕ್ಕ ಕೊಡಿ ಎಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಎರಡು ಮೂರು ದಿನದಲ್ಲಿ ಲೆಕ್ಕ ಕೊಡುವುದಾಗಿ ಹೇಳಿದ್ದಾರೆ. ಲೆಕ್ಕ ಕೊಟ್ಟ ಮೇಲೆ ಮತ್ತೆ ಬರುತ್ತೇನೆ. ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಸೋಂಕು ಹರಡದಂತೆ ಕ್ರಮವಹಿಸಬೇಕು‌ ಮೊದಲು. ಮೂಲಭೂತ ಸೌಲಭ್ಯಗಳನ್ನ ಒದಗಿಸುವ ಕೆಲಸ ಮಾಡಬೇಕು. ಸರ್ಕಾರದ ವಿರುದ್ಧ ಹಳ್ಳಿ ಹಳ್ಳಿಯಿಂದಲೇ ಹೋರಾಟ ನಡೆಸುತ್ತೇವೆ. ಪಕ್ಷದಲ್ಲಿ ತೀರ್ಮಾನಿಸಿ ಗಣಿ ಹೋರಾಟದ ರೀತಿಯೇ ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next