ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ನಡೆದ ಸೋಲಾರ್ ಹಂಚಿಕೆ ಹಗರಣದ ತನಿಖೆಗೆ ಸರ್ಕಾರ ಮೀನಾಮೇಷ ಎಣಿಸುತ್ತಿರುವ ಬಗ್ಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದ್ದು, ಈ ಸಂಬಂಧ ಯಾವುದೇ ಕ್ಷಣದಲ್ಲಿ ಸರ್ಕಾರ ತನಿಖೆಗೆ ಆದೇಶ ನೀಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸೋಲಾರ್ ಉತ್ಪಾದನೆಗಾಗಿ ಕರೆದ ಆನ್ ಲೈನ್ ಅರ್ಜಿ ಹಂಚಿಕೆಯಲ್ಲಿ ಭಾರಿ ಅಕ್ರಮ ನಡೆದಿತ್ತು ಎಂಬ ಆರೋಪ ವ್ಯಕ್ತವಾಗಿತ್ತು. 2100 ಕೋಟಿ ರೂ. ಮೊತ್ತದ 300 ಮೆಗಾ ವ್ಯಾಟ್ ಸೋಲಾರ್ ಹಂಚಿಕೆಯನ್ನು ಕೇವಲ ಎಂಟೇ ನಿಮಿಷದಲ್ಲಿ ಅರ್ಜಿ ಪ್ರಕ್ರಿಯೆ ಮುಕ್ತಾಯಗೊಳಿಸಲಾಗಿತ್ತು. ಇದರಲ್ಲಿ ಸಾರ್ವಜನಿಕ ಹೊಣೆಗಾರಿಕೆ ನೀತಿಯನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ವ್ಯಕ್ತವಾಗಿತ್ತು.
120 ಸೆಕೆಂಡ್ ಗಳಲ್ಲಿ 126 ರೈತರಿಂದ ಅರ್ಜಿ ಸ್ವೀಕರಿಸುವುದು ತರ್ಕಕ್ಕೆ ಮತ್ತು ವಾಸ್ತವಕ್ಕೆ ನಿಲುಕದ ವಿಚಾರವಾಗಿದ್ದು, ಈ ಅವಧಿಯಲ್ಲಿ ಅರ್ಜಿ ತುಂಬುವುದು ಅಸಾಧ್ಯ ಎಂದು ಆರೋಪ ವ್ಯಕ್ತವಾಗಿತ್ತು.
ಇದನ್ನೂ ಓದಿ:ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ
ಆದರೆ ಅಂದಿನ ಇಂಧನ ಸಚಿವರು 26 ಸಾವಿರ ಅರ್ಜಿ ಬಂದಿದೆ. ಆ ಪೈಕಿ 295 ಆಯ್ಕೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇ ಆಡಳಿತ ಎಂಟು ನಿಮಿಷದಲ್ಲಿ 265 ಅರ್ಜಿ ಸ್ವೀಕಾರವಾಗಿದೆ ಎಂದು ಹೇಳಿದ್ದು ಗೊಂದಲ ಮೂಡಿಸಿತ್ತು. ಆದರೆ ಈ ಅರ್ಜಿಗಳಲ್ಲಿ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬದ ಮೂವರಿಗೆ ಅವಕಾಶ ನೀಡಲಾಗಿತ್ತು. ಹೈದರಾಬಾದ್ ಮೂಲದ ಕೆಲ ಕಂಪನಿಗಳು ಅರ್ಜಿ ಸ್ವೀಕಾರಕ್ಕೆ ಮುನ್ನ ಭೂಮಿ ಖರೀದಿಯನ್ನೂ ಮಾಡಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಬಿಜೆಪಿ ಹೈಕಮಾಂಡ್ ತನಿಖೆಗೆ ಸೂಚನೆ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಪಕ್ಷದ ವಲಯದಲ್ಲಿ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಸರಕಾರ ಅನಿವಾರ್ಯವಾಗಿ ತನಿಖೆ ನಡೆಸಲು ಮುಂದಾಗಿದ್ದು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಸರಕಾರ ಚಿಂತನೆ ನಡೆಸಿದೆ.