ಬೆಂಗಳೂರು: ರಾಜಧಾನಿ ಬೆಂಗಳೂರು ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಅಭಿವೃದ್ದಿ ಹೆಸರಿನಲ್ಲಿ ನೂರಾರು ಕೋಟಿ ರೂ. ಲೂಟಿ ಹೊಡೆಯಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಲೂಟಿ ಹೊಡೆಯುವ ಸಲುವಾಗಿಯೇ ಬಿಬಿಎಂಪಿಗೆ ಚುನಾವಣೆ ನಡೆಸುತ್ತಿಲ್ಲ ಎಂದು ದೂರಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಲೆಕ್ಕಕ್ಕೆ ಸಿಗದ ದುಸ್ಥಿತಿಗೆ ತಲುಪಿವೆ. 2008ರಿಂದ 2013ರವರೆಗೆ ಅಧಿಕಾರ ಮಾಡಿದ್ದ ಬಿಜೆಪಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬೀಳಿಸಿತ್ತು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನಾನು ಬೆಂಗಳೂರು ಉಸ್ತುವಾರಿಯಾದ ನಂತರ ನಾವು ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದೆವು.
ಇದನ್ನೂ ಓದಿ;- ಕಿಷ್ಕಿಂದಾ ಅಂಜನಾದ್ರಿ ಪುನೀತ್ ರಾಜ್ ಕುಮಾರ್ ನೆಚ್ಚಿನ ಶ್ರದ್ಧಾಕೇಂದ್ರ
ಈಗ ಅವರು ಮತ್ತೆ ಅಧಿಕಾರಕ್ಕೆ ಬಂದ ನಂತರ ರಸ್ತೆಗಳು ಮತ್ತೆ ದುಸ್ಥಿತಿ ತಲುಪಿವೆ ಎಂದು ದೂರಿದರು. ಬಿಜೆಪಿಯವರಿಗೆ ಆಡಳಿತ ಮಾಡಲು ಬರುವುದಿಲ್ಲ. ಬೆಂಗಳೂರಿನ ರಸ್ತೆ ಸ್ಥಿತಿ ಕಂಡು ಹೈಕೋರ್ಟ್ ಚಿಮಾರಿ ಹಾಕುವಂತಾಗಿದೆ. ಈಗ ರಸ್ತೆಗುಂಡಿಯಿಂದ ಅಪಘಾತ ಹೆಚ್ಚಾಗಿದ್ದು, ಜನ ಸಾಯುತ್ತಿದ್ದಾರೆ, ಗಾಯಗೊಳ್ಳುತ್ತಿದ್ದಾರೆ. ಜನ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ.
ಪಾಲಿಕೆ ಆಯುಕ್ತರು, ಸಚಿವ ಆರ್.ಅಶೋಕ್ ಸೇರಿದಂತೆ ಹಲವರು ಗುಂಡಿ ಮುಚ್ಚಲು ಗಡುವು ಕೊಟ್ಟರೂ ಇದುವರೆಗೂ ಗುಂಡಿಗಳು ಮುಚ್ಚಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಅಭಿ ವೃದ್ಧಿಗೆ ಸಾವಿರಾರು ಕೋಟಿ ರೂ. ಹಣ ನೀಡಿದ್ದರು. ಟೆಂಡರ್ ಶ್ಯೂರ್ ಸೇರಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಆದರೆ, ಆ ಹಣ ಲೂಟಿ ಮಾಡಲು ಚುನಾವಣೆ ನಡೆಸದೆ ಇವರೇ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.