Advertisement

ರಾಮನಗರ ಜಿಲ್ಲೆಯಲ್ಲಿ ಕಮಲದ ಕಮಾಲ್‌!

04:22 PM Jan 01, 2021 | Team Udayavani |

ರಾಮನಗರ: ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ನಿರೀಕ್ಷೆಗೂ ಮೀರಿ ಖಾತೆ ತೆರೆದಿದ್ದಾರೆ ಎಂದು ಬಿಜೆಪಿ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲೆಯ 4 ತಾಲೂಕುಗಳಲ್ಲಿ 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿಗರು ಪಂಚಾಯ್ತಿಗೆ ಆಯ್ಕೆಯಾಗಿದ್ದು, ಬೇರು ಮಟ್ಟದಲ್ಲಿ ಪಕ್ಷ ಖಾತೆ ತೆರೆದಂತಾಗಿದೆ ಎಂದು ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಅವರ ಮುಷ್ಟಿಯಲ್ಲಿರುವ ಜಿಲ್ಲೆಯ ರಾಜಕಾರಣದಲ್ಲಿ ಬಿಜೆಪಿ ಹೊಸ ಶಖೆ ಆರಂಭಿಸಿದೆ.

ಬಿಜೆಪಿಗೆ ಜಿಲ್ಲೆಯಲ್ಲಿ ನೆಲೆಯಿಲ್ಲ ಎಂದು ಮೂಗು ಮುರಿಯುತ್ತಿದ್ದ ರಾಜಕೀಯ ವಿರೋಧಿಗಳಿಗೆ ತಕ್ಕ ಉತ್ತರವನ್ನು ಮತದಾರ ನೀಡಿದ್ದಾನೆ. ಜಿಲ್ಲೆಯ ರಾಜಕೀಯವನ್ನು ಗುತ್ತಿಗೆ ಪಡೆದವರಂತೆ ಈ ಎರಡೂ ಪಕ್ಷಗಳ ನಾಯಕರು ಬೀಗುತ್ತಿದ್ದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮತ್ತು ಇತರ ಪ್ರಮುಖರ ಶ್ರಮ ಫ‌ಲ ಕೊಟ್ಟಿದೆ ಎಂದು ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ.

ಕನಕಪುರ ಬಂಡೆಯಲ್ಲಿ ಬಿರುಕು!: ಬಿಜೆಪಿ ಕಾರ್ಯಕರ್ತರಿಗೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರು ಒಟ್ಟು234 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರ ಭದ್ರಕೋಟೆ ಕನಕಪುರದಲ್ಲಿಯೇ ಬಿಜೆಪಿ 52 ಗ್ರಾಪಂ ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ಕನಕಪುರದ ಬಂಡೆ ಸ್ಪಷ್ಟವಾಗಿ ಬಿರುಕುಬಿಟ್ಟಂತೆ ಆಗಿದೆ. ವಿಶೇಷವೆಂದರೆ ಕನಕಪುರ ತಾಲೂಕಿನಲ್ಲಿ ಜೆಡಿಎಸ್‌ ಬೆಂಬಲಿತರಿಗಿಂತ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಡಿಕೆಎಸ್‌ ಚಾರಿಟಬಲ್‌ಟ್ರಸ್ಟ್‌ ಅಧ್ಯಕ್ಷ ವಿಶ್ವನಾಥ್‌ ಅವರು ತಮ್ಮ ಸ್ವಗ್ರಾಮ ಚಿಕ್ಕೊಂಡಳ್ಳಿಯಲ್ಲಿ ಮತ್ತು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ ಅವರೂ ತಮ್ಮ ಹುಟ್ಟೂರು ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ಸೋತಿದ್ದಾರೆ ಎಂದು ಕನಕಪುರದ ಬಿಜೆಪಿ ಕಾರ್ಯಕರ್ತರು ವಿಶ್ಲೇಷಿಸಿದ್ದಾರೆ.

ಮಾಗಡಿ: ಮಾಜಿ-ಹಾಲಿ ಶಾಸಕರ ಪ್ರತಿಷ್ಠೆ ನಡುವೆ ಅರಳಿದ ಕಮಲ : ಮಾಗಡಿ ತಾಲೂಕಿನಲ್ಲಿ ಬಿಜೆಪಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿಗರು ಜಯಗಳಿಸಿದ್ದಾರೆ ಎಂದು ಆ ತಾಲೂಕಿನ ಕಾರ್ಯಕರ್ತರು ಪ್ರತಿಕ್ರಿಯಿಸಿದ್ದಾರೆ. ಮಾಗಡಿ ತಾಲೂಕಿನ ಮೂಲದವರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣಮಾಗಡಿ ತಾಲೂಕಿನಲ್ಲಿ ಪ್ರಚಾರ ನಡೆಸಿದ್ದರು.ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಇಬ್ಬರ ನಡುವಿನ ಕಾಳಗದಲ್ಲಿಕಮಲ ಅರಳಿದೆ ಎಂದು ಮಾಗಡಿಯ ಪ್ರಮುಖರು ತಿಳಿಸಿದ್ದಾರೆ.

Advertisement

ರಾಮನಗರದಲ್ಲಿ ಜೆಡಿಎಸ್‌ಗೆ ಆಘಾತ!: ಜೆಡಿಎಸ್‌ ಭದ್ರಕೋಟೆ ರಾಮನಗರ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಗ್ರಾಪಂ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವಿನ ಧ್ವಜ ಹಾರಿಸಿದ್ದಾರೆ. ಎಂದಿನಂತೆ ಈ ಬಾರಿಯೂ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲಿತರನಡುವೆ ಭಾರಿ ಪೈಪೋಟಿ ಇತ್ತು. ಆದರೆ ಪಕ್ಷದಬೆಂಬಲಿತರು ಲಗ್ಗೆ ಇಡುವಲ್ಲಿ ಯಶಸ್ವಿಯಾಗಿದ್ದಾರೆ.ಕೈಲಾಂಚ, ಮಂಚನಾಯ್ಕನಹಳ್ಳಿಯಂತ ಜೆಡಿಎಸ್‌ಭದ್ರಕೋಟೆಯಲ್ಲೇ ಕಮಲ ಅರಳಿದೆ ಎಂದು ಜಿಲ್ಲಾಬಿಜೆಪಿ ಕಾರ್ಯದರ್ಶಿ ರುದ್ರದೇವರು ತಿಳಿಸಿದ್ದಾರೆ.

ಚನ್ನಪಟ್ಟಣ ಜೆಡಿಎಸ್‌ನಲ್ಲಿ ಕಂಪನ: ಚನ್ನಪಟ್ಟಣ ತಾಲೂಕಿನಲ್ಲಿಯೂ ಬಿಜೆಪಿ ತನ್ನ ಹವಾ ಸೃಷ್ಟಿಸಿದೆ. ಅಲ್ಲಿ ಕಮಲದ ಅಬ್ಬರಕ್ಕೆ ಕಾಂಗ್ರೆಸ್‌ ಮಕಾಡೆ ಮಲಗುವ ಸ್ಥಿತಿ ತಲುಪಿದೆ. 142ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯ ದಾಖಲಿಸಿದ್ದಾರೆ. ಬಿಜೆಪಿಯ ಅಚ್ಚರಿ ಓಟಕ್ಕೆ ಜೆಡಿಎಸ್‌ ಪಾಳಯದಲ್ಲಿ ಕಂಪನ ಉಂಟಾಗಿದೆ ಎಂದು ಅಲ್ಲಿನ ಕಾರ್ಯಕರ್ತರು ತಿಳಿಸಿದ್ದಾರೆ.

ಇದು ಕಾರ್ಯಕರ್ತರ ಶ್ರಮದ ಫ‌ಲ ;  ಜಿಲ್ಲೆಯಲ್ಲಿ ಬಿಜೆಪಿ ತಳವೂರುತ್ತಿದೆ. ಇದಕ್ಕೆ ಸಾಕ್ಷಿಇತ್ತೀಚಿನ ಗ್ರಾಮಪಂಚಾಯ್ತಿ ಚುನಾವಣೆ.ಯಾವುದೋ ಒಬ್ಬ ವ್ಯಕ್ತಿಯಿಂದ ಈ ಗೆಲವು ಸಿಕ್ಕಿದ್ದಲ್ಲ.ಡಿಸಿಎಂ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಹಾಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ , ಜಿಲ್ಲಾ ಬಿಜೆಪಿ ಅಧ್ಯಕ್ಷಹುಲುವಾಡಿ ದೇವರಾಜ್‌ ಸೇರಿದಂತೆ ಪಕ್ಷದ ಮುಖಂಡರುಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯನ್ನು ಸುತ್ತಿದ್ದಾರೆ.ಕಾರ್ಯಕರ್ತರ ಪರಿಶ್ರಮದಿಂದಾಗಿ ಜಿಲ್ಲೆಯಲ್ಲಿಕಮಲ ಅರಳುತ್ತಿದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರದೇವರು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಭಿನ್ನ ರಾಗ! :  ಈಗಷ್ಟೆ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವ ಬಿಜೆಪಿಯಲ್ಲಿ ಗುಂಪುಗಾರಿಕೆ ದನಿಯೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಪ್ರತಿಧ್ವನಿಸಿದೆ. ಗೆದ್ದಿರುವ ಬೆಂಬಲಿಗರೆಲ್ಲರೂ ಕೆಐಆರ್‌ಡಿಎಲ್‌ ಅಧ್ಯಕ್ಷ ಎಂ.ರುದ್ರೇಶ್‌ ಆಪ್ತರು ಎಂದು ಬಿಜೆಪಿ ಪ್ರಮುಖ ಕಾರ್ಯಕರ್ತ ರಮೇಶ್‌ ಸಾಮಾಜಿಕ ಜಾಲ ತಾಣದಲ್ಲಿ ವಾದಿಸಿದ್ದಾರೆ. ಎಂ.ರುದ್ರೇಶ್‌ ಅವರ ಪ್ರಭಾವ ಹೆಚ್ಚಿರುವುದು ಸಾಬೀತಾಗಿದೆ. ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ  ಅವರು ಇದೇ ಜಿಲ್ಲೆಯವರಾಗಿದ್ದರೂ ಸಂಘಟನೆಯಲ್ಲಿ ಎಡವಿದ್ದಾರೆ. ಇನ್ನು ಹೆಚ್ಚಿನ ಸ್ಥಾನ ಗೆಲ್ಲ ಬಹುದಿತ್ತು. ಆದರೆ ಬಿಜೆಪಿಗೆ ಬಿಜೆಪಿನೇಶತ್ರುವಾಗಿದ್ದರಿಂದ ಹೆಚ್ಚಿನ ಸಾಧನೆ ಸಾಧ್ಯವಾಗಿಲ್ಲ ಎಂದು ರಮೇಶ್‌ ಅವರ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next