ಬೆಂಗಳೂರು: “ರಾಜ್ಯದ ಜನತೆ ಬಿಜೆಪಿ ವಿರುದ್ಧ ಮತ ಹಾಕಿದ್ದಾರೆ. ಹೀಗಾಗಿ ಅವರು ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿ ಪಲಾಯನ ಮಾಡಿದರು’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಿಜೆಪಿಗೆ ಸರ್ಕಾರ ರಚನೆಗೆ ಸಾಧ್ಯತೆ ಇಲ್ಲದಿದ್ದರೂ, ಪ್ರಧಾನಿ ನರೇಂದ್ರ ಮೋದಿ ನಾವು ಸರ್ಕಾರ ರಚನೆ ಮಾಡಿಯೇ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳಿದರು. ಈ ಮೂಲಕ ಕುದುರೆ ವ್ಯಾಪಾರಕ್ಕೆ ಬಹಿರಂಗವಾಗಿಯೇ ಬೆಂಬಲ ನೀಡಿದರು. ಯಡಿಯೂರಪ್ಪಗೆ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದು ಸಂವಿಧಾನ ಬಾಹಿರ ಎಂದು ಹೇಳಿದರು.
ಯಡಿಯೂರಪ್ಪ ಸದನದಲ್ಲಿ ಹೇಳಿದ್ದು ನೂರಕ್ಕೆ ನೂರು ಸುಳ್ಳು, ನೀರಾವರಿ ಬಗ್ಗೆ ಮಾತನಾಡುತ್ತಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನೀರಾವರಿಗೆ ಎಷ್ಟು ಹಣ ಖರ್ಚು ಮಾಡಿದ್ದರು. ಸಾಲಮನ್ನಾ ಮಾಡುವಂತೆ ಕೇಳಿದಾಗ ಎಲ್ಲಿ ಹೋಗಿದ್ದರು. ಯಡಿಯೂರಪ್ಪನಂತ ಡೋಂಗಿ ಹಾಗೂ ಭ್ರಷ್ಟ ರಾಜಕಾರಣಿ ಇನ್ನೊಬ್ಬರಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಸದನದಲ್ಲಿ ಆಡಳಿತ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಿದಾಗ ಪ್ರತಿಪಕ್ಷದ ನಾಯಕನಿಗೂ ಮಾತನಾಡುವ ಅವಕಾಶ ಕೊಡಬೇಕು. ಹಂಗಾಮಿ ಸ್ಪೀಕರ್ ಅವರ ಜೊತೆಗೆ ಸೇರಿಕೊಂಡಿದ್ದರು. ಕಾಂಗ್ರೆಸ್ ಶಾಸಕರಿಗೆ ಆಪರೇಶನ್ ಮಾಡಲು ಹಣದ ಆಮಿಷ ಒಡ್ಡಿರುವ ಬಗ್ಗೆ ದಾಖಲೆ ಬಿಡುಗಡೆಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ ? ಅವರು ನಮಗೆ ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುತ್ತಾರೆ. ಯಡಿಯೂರಪ್ಪ ಅತ್ಯಂತ ದೊಡ್ಡ ಸುಳ್ಳುಗಾರ ಎಂದು ಟೀಕಿಸಿದರು.
“ಆಪರೇಷನ್ ಕಮಲ’ ಸೋತಿತು, ಪ್ರಜಾಪ್ರಭುತ್ವ ಗೆದ್ದಿತು, ಸಂವಿಧಾನ ಗೆದ್ದಿತು. ಯಡಿಯೂರಪ್ಪ ಅವರು 2 ದಿನದ ಸಿಎಂ ಆಗುವ ಮೂಲಕ, 7 ದಿನದ ಸಿಎಂ ಆದ ತಮ್ಮದೇ ದಾಖಲೆಯನ್ನು ಮುರಿದರು.
-ರಣದೀಪ್ ಸುಜೇವಾಲಾ, ಕಾಂಗ್ರೆಸ್ ವಕ್ತಾರ
ಪ್ರಜಾಪ್ರಭುತ್ವ ಗೆದ್ದಿತು. ಕರ್ನಾಟಕಕ್ಕೆ, ದೇವೇಗೌಡ ಅವರಿಗೆ, ಕುಮಾರಸ್ವಾಮಿ ಅವರಿಗೆ, ಕಾಂಗ್ರೆಸ್ ಮತ್ತು ಇತರರಿಗೆ ಅಭಿನಂದನೆಗಳು. “ಪ್ರಾದೇಶಿಕ’ ರಂಗಕ್ಕೆ ಗೆಲುವಾಯಿತು.
-ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ನಾಯಕಿ
ಈಗಾಗಲೇ ನಾವು ರಾಜ್ಯಪಾಲರಿಗೆ ಸರ್ಕಾರ ರಚನೆಗೆ ಮನವಿ ಮಾಡಿಕೊಂಡಿದ್ದೇವೆ. ಸಚಿವ ಸ್ಥಾನ ಹಂಚಿಕೆಯ ಬಗ್ಗೆ ಇದುವರೆಗೂ ಯಾವುದೇ ಚರ್ಚೆಯಾಗಿಲ್ಲ. ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದು ನಮ್ಮ ಉದ್ದೇಶ. ನಂತರ ಎಲ್ಲ ವಿಚಾರಗಳ ಬಗ್ಗೆ ತೀರ್ಮಾನ ಮಾಡುತ್ತೇವೆ.
-ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ