Advertisement

ಬರ ಪರಿಸ್ಥಿತಿ ಗಂಭೀರವಾಗಿ ಪರಿಗಣಿಸುವಲ್ಲಿ ಬಿಜೆಪಿ ವಿಫಲ; ಈಶ್ವರಪ್ಪ

03:09 PM May 07, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಭಾರತೀಯ ಜನತಾ ಪಕ್ಷ ವಿಫಲವಾಗಿದೆ. ಬರಗಾಲ ಎದುರಿಸುತ್ತಿದ್ದ ಜನರ ಕಷ್ಟವನ್ನು ನಾವು ಕೇಳಬೇಕಿತ್ತು. ಆದರೆ ಅದರಲ್ಲಿ ನಾವು ಎಡವಿದ್ದೇವೆ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು.

Advertisement

ಮೈಸೂರಿನಲ್ಲಿ ನಡೆಯುತ್ತಿರುವ 2ನೇ ದಿನದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬರಪರಿಸ್ಥಿತಿ ನಿರ್ಣಯ ಮಂಡಿಸಿ ಮಾತನಾಡುತ್ತಿದ್ದ ವೇಳೆ ಬಿಜೆಪಿ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.

ವಸ್ತು ಸ್ಥಿತಿ ಅವಲೋಕಿಸಿ ಬರ ಸ್ಥಿತಿಯ ವರದಿ ಸಿದ್ಧ ಮಾಡೋಣ. ಅಷ್ಟೇ ಅಲ್ಲ ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧಾರ ಮಾಡೋಣ. ರಾಜ್ಯ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸೋತಿದೆ ಎಂದು ಆರೋಪಿಸಿದರು.

ಮೇ 18ರಿಂದ ರಾಜ್ಯಾದ್ಯಂತ ಬರ ಪ್ರವಾಸ:
ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಬಿಜೆಪಿ ವಿಫಲವಾಗಿದೆ. ನಮ್ಮ ಕಾರ್ಯಕರ್ತರು ಸಮಸ್ಯೆ ಇರೋ ಕಡೆ ಹೋಗುತ್ತಿಲ್ಲ ಎಂದು ಈಶ್ವರಪ್ಪ ಪ್ರಸ್ತಾಪಿಸಿದ ಬೆನ್ನಲ್ಲೇ ಎಚ್ಚೆತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮೇ 18ರಿಂದ ರಾಜ್ಯಾದ್ಯಂತ ಬರ ಪ್ರವಾಸ ಕೈಗೊಳ್ಳುವುದಾಗಿ ಹೇಳಿದರು.

ಆದರೆ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಇಂದೂ ಕೂಡಾ ಬಿಎಸ್ ವೈ ಮತ್ತು ಈಶ್ವರಪ್ಪ ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದರು. ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಪ್ರತಿನಿಧಿಗಳು ಕೂಡಾ ನಿರುತ್ಸಾಹ ತೋರಿದ್ದಾರೆ. ಬಹುತೇಕ ಶಾಸಕರು, ಜನಪ್ರತಿನಿಧಿಗಳು ಕಾರ್ಯಕಾರಿಣಿಯಿಂದ ನಿರ್ಗಮಿಸಿದ್ದರು.

Advertisement

ನಮ್ಮ ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪನವರೇ:
2ನೇ ಹಾಗೂ ಕೊನೆ ದಿನದ ಬಿಜೆಪಿ ಕಾರ್ಯಕಾರಿಣಿಯಲ್ಲಿ  ಕೆಎಸ್ ಈಶ್ವರಪ್ಪನವರು, ನಮ್ಮ ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪನವರೇ ಎಂದು ಮಾತು ಆರಂಭಿಸಿದ್ದರು. ಮುಂದಿನ ಬಾರಿ ಬಿಎಸ್ ವೈ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದಾಗ ಸಭೆಯಲ್ಲಿದ್ದ ಮುಖಂಡರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next