ಬೆಂಗಳೂರು: ಅಚ್ಚರಿ ಅಭ್ಯರ್ಥಿಗಳ ಆಯ್ಕೆ ಸಾಧ್ಯತೆಗೆ ಅವಕಾಶ ಕಲ್ಪಿಸುವ ಬಿಜೆಪಿಯ ಮಹತ್ವದ ಚುನಾವಣ ತಂತ್ರಗಾರಿಕೆ ಸಭೆ ಶನಿವಾರ ಮತ್ತು ರವಿವಾರ ಬೆಂಗಳೂರಿನಲ್ಲಿ ನಡೆಯಲಿದೆ.
ಎಲ್ಲ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿರುವ ಬಿಜೆಪಿ ಚುನಾವಣಾ ತಂತ್ರಗಾರಿಕೆ ಸಂಸ್ಥೆ ವಾರಾಹಿ ಸಂಗ್ರಹಿ ಸಿರುವ ಮಾಹಿತಿ ವಿಶ್ಲೇಷಣೆಗಾಗಿ ಈ ಸಭೆ ಆಯೋಜಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಧ್ಯಕ್ಷತೆ ವಹಿಸುವರು. ಅಗರ್ತಲಾ ಪ್ರವಾಸದಲ್ಲಿರುವ ಸಂತೋಷ್ ಅವರು ಶನಿವಾರ ಮಧ್ಯಾಹ್ನ ಬೆಂಗ ಳೂರಿಗೆ ಆಗಮಿಸುವರು. ಇಲ್ಲವಾದರೆ ವರ್ಚುವಲ್ ಸಭೆ ನಡೆಸುವರು.
ಬಿಜೆಪಿ ಮೂಲಗಳ ಪ್ರಕಾರ, ಕಳೆದ ಚುನಾವಣೆಯಲ್ಲಿ ಸೋತಕ್ಷೇತ್ರ ಗಳಲ್ಲಿ ನಡೆದ ಸಮೀಕ್ಷೆ ಮಾಹಿತಿ ಬಗ್ಗೆ ಚರ್ಚಿಸಲಾಗುವುದು. ಹಳೇ ಮೈಸೂರು ಭಾಗ ಹಾಗೂ ಅದಕ್ಕೆ ಹೊಂದಿಕೊಂಡ ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಹಳೇ ಮೈಸೂರು ಭಾಗ ಇನ್ನೂ ಬಿಜೆಪಿಗೆ ಕಗ್ಗಂಟಾಗಿರುವ ಕಾರಣ, ಈ ಬಾರಿ ಒಂದಿಷ್ಟು ಪ್ರಯೋಗ ನಡೆಯಲಿದ್ದು, ಕೆಲವು ಅಚ್ಚರಿ ಅಭ್ಯರ್ಥಿಗಳ ಹೆಸರೂ ಪ್ರಕಟವಾಗಬಹುದು.
ಇವುಗಳ ಮಧ್ಯೆ ವಿವಿಧ ಸಮಿತಿಗಳ ಹೊಸ ಅಧ್ಯಕ್ಷರು ಪಕ್ಷದ ಕಚೇರಿಯಲ್ಲಿ ಸಭೆ ಆರಂಭಿಸಿದ್ದಾರೆ. ರಥಯಾತ್ರೆಗೆ ಸಂಬಂಧಪಟ್ಟಂತೆ ಪರಿಷತ್ ಸದಸ್ಯ ಎನ್.ರವಿಕುಮಾರ್, ಮೋರ್ಚಾ ಗಳಿಗೆ ಸಂಬಂಧಪಟ್ಟಂತೆ ಬಿ.ವೈ.ವಿಜಯೇಂದ್ರ ಎರಡು ಸುತ್ತಿನ ಸಭೆ ನಡೆಸಿದ್ದು, ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ ಸಚಿವ ಡಾ| ಕೆ.ಸುಧಾಕರ್ ಶುಕ್ರವಾರ ಸಭೆ ನಡೆಸಿದರು.