Advertisement

BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ

11:21 PM Sep 13, 2024 | Team Udayavani |

ಬೆಂಗಳೂರು: ಬಿಜೆಪಿ ಕಾಲಾವಧಿಯಲ್ಲಿ ನಡೆದ ಹಗರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ರಚನೆಗೊಂಡ ಸಚಿವ ಸಂಪುಟ ಉಪಸಮಿತಿ ಸಭೆ ಶುಕ್ರವಾರ ತನ್ನ ಮೊದಲ ಸಭೆ ನಡೆಸಿದ್ದು ಐದಾರು ಮಹತ್ವದ ಪ್ರಕರಣಗಳ ಬಗ್ಗೆ ವಿಶ್ಲೇಷಣೆ ನಡೆಸಿದೆ.

Advertisement

ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ.ಕಳೆದ ತಿಂಗಳು ದಿಲ್ಲಿಗೆ ತೆರಳಿದ್ದ ಸಿದ್ದ ರಾಮಯ್ಯ ಹೈಕಮಾಂಡ್‌ ನಾಯಕರ ಮೂಲಕವೇ ಬಿಜೆಪಿ ಕಾಲದ ಪ್ರಕರಣ ವನ್ನು ಮತ್ತೆ ಕೆದಕಬೇಕೆಂಬ ಸೂಚನೆ ಕೊಡಿಸಿದ್ದರು.ಇದರ ಮುಂದುವರಿದ ಭಾಗವಾಗಿ 2 ದಿನಗಳ ಹಿಂದೆ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಂಪುಟ ಉಪ ಸಮಿತಿ ವಿಧಾನಸೌಧದಲ್ಲಿ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್‌ ಮೋಹನ್‌ ಸೇರಿ ಹಿರಿಯ ಅಧಿಕಾರಿಗಳ ಜತೆಗೆ ಶುಕ್ರವಾರ ಸಭೆ ನಡೆಸಿದೆ.

ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ
ತನಿಖೆ ಪ್ರಗತಿ ಪರಿಶೀಲನೆ, ವೇಗ ಹೆಚ್ಚಳ, ಸಮನ್ವಯ ಮುಂತಾದ ಕಾರ್ಯಗಳನ್ನು ಪರಾಮರ್ಶಿಸಿ 2 ತಿಂಗಳೊಳಗಾಗಿ ಸಂಪುಟದಲ್ಲಿ ವರದಿ ಮಂಡಿಸಬೇಕೆಂಬ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಲಾಗಿದೆ. ಮೊದಲ ಸಭೆಯಲ್ಲಿ ಐದಾರು ಪ್ರಕರಣಗಳ ತನಿಖೆಯ ವಸ್ತುಸ್ಥಿತಿ ಪರಾ ಮರ್ಶಿಸಿದ್ದು ಇನ್ನು ಮುಂದೆ ಸಮಿತಿ ನಿಯಮಿತ ವಾಗಿ ಸಭೆ ಸೇರಿ ಉಳಿದೆಲ್ಲ ಪ್ರಕರಣಗಳನ್ನು ಪರಿಶೀಲಿಸಲು ನಿರ್ಧರಿಸಿದ್ದೇವೆ.

ಯಾವುದೆಲ್ಲ ಹಗರಣಗಳು, ಏನೆಲ್ಲ ಪರಿಶೀಲಿಸಿದ್ದೇವೆ ಎಂಬ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಸಮಿತಿ ವರದಿ ಸಿದ್ಧಪಡಿಸಿ ಸಚಿವ ಸಂಪುಟ ಸಭೆಗೆ ಮಂಡಿಸಿದ ನಂತರ ಎಲ್ಲ ವಿವರ ಲಭ್ಯವಾಗುತ್ತವೆ ಎಂದು ಸಭೆ ಬಳಿಕ ಡಾ| ಜಿ.ಪರಮೇಶ್ವರ್‌ ಸುದ್ದಿಗಾರರಿಗೆ ತಿಳಿಸಿದರು.

ಅಶ್ವತ್ಥ ನಾರಾಯಣ ಕೇಸ್‌ ರೀ ಓಪನ್‌?
ಮೂಲಗಳ ಪ್ರಕಾರ, ಈ ಸಭೆಯಲ್ಲಿ ಐದಾರು ಪ್ರಕರಣದ ಮಾಹಿತಿ ಪಡೆಯಲಾಗಿದೆ. ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಪ್ರಕರಣ ಕೂಲಂಕಷವಾಗಿ ಪರಿಶೀಲನೆಯಾಗಿದೆ. ಬಿಜೆಪಿ ಆಡಳಿತಾವಧಿಯ 21 ಹಗರಣಗಳ ಜತೆಗೆ ಇನ್ನೂ ಏಳೆಂಟು ಪ್ರಕರಣಗಳು ಸೇರ್ಪಡೆಯಾಗಿವೆ ಎಂದು ಮೂಲಗಳು ತಿಳಿಸಿವೆ.

Advertisement

ಉಪನ್ಯಾಸಕರು, ಪಿಎಸ್‌ಐ ನೇಮಕ, ಕಾಕಂಬಿ ಖರೀದಿ, ಕಿಯೋನಿಕ್ಸ್‌, ವಿವಿಧ ಅಭಿವೃದ್ಧಿ ನಿಗಮಗಳ ಅವ್ಯವಹಾರಗಳು, ಶೇಕಡ 40 ಕಮಿಷನ್‌ ಆರೋಪ, ಕೋವಿಡ್‌ ಅಕ್ರಮ, ಗ್ರಾಮೀಣಾಭಿವೃದ್ಧಿ, ಲೋಕೋಪ ಯೋಗಿ, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಸೇರಿ 35ಕ್ಕೂ ಹೆಚ್ಚು ಹಗರಣ ಗಳನ್ನು ಈ ಸಮಿತಿ ಪರಿಶೀಲಿಸಿ ವರದಿ ನೀಡಲಿದೆ ಎಂದು ಗೊತ್ತಾಗಿದೆ.

ದ್ವೇಷದ ರಾಜಕಾರಣವಲ್ಲ
ಬಿಜೆಪಿ ಸರ್ಕಾರದಷ್ಟೇ ಅಲ್ಲ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಹಾಗೂ ಹಿಂದಿನ ಕಾಂಗ್ರೆಸ್‌ ಸರಕಾರದ ಪ್ರಕರಣಗಳನ್ನು ವಿವಿಧ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಎಲ್ಲ ಹಗರಣಗಳನ್ನು ಸಮಿತಿ ಪರಾಮರ್ಶಿಸುತ್ತಿದ್ದೇವೆ. ಕಾನೂನು ಬಾಹಿರ ಪ್ರಕರಣಗಳ ಸತ್ಯಾಸತ್ಯತೆ ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮವಹಿಸಲು ಸರಕಾರ ಮುಂದಾದರೆ ಬಿಜೆಪಿಯವರು ದ್ವೇಷ ರಾಜಕಾರಣವೆಂದು ಭಾವಿಸುವುದೇಕೆ? ಎಂದು ಪ್ರಶ್ನಿಸಿದರು. ಮುಡಾ ಪ್ರಕರಣದಲ್ಲಿ ಬಿಜೆಪಿ ಹೋರಾಟ ಆರಂಭಿಸುವುದಕ್ಕಿಂತ ಮುನ್ನ ಅನೇಕ ಅಕ್ರಮ ಪ್ರಕರಣಗಳ ತನಿಖೆಯನ್ನು ವಿವಿಧ ಸಂಸ್ಥೆಗಳು ಕೈಗೆತ್ತಿಕೊಂಡಿವೆ. ತನಿಖೆಗೆ ವೇಗ ನೀಡಿ ತಾರ್ಕಿಕ ಅಂತ್ಯ ಕಾಣಿಸಲು ಸಚಿವರನ್ನು ಒಳಗೊಂಡ ಸಮಿತಿ ರಚನೆಯಾಗಿದೆ ಎಂದು ಸಮರ್ಥಿಸಿಕೊಂಡರು.

ಸಮರ್ಥ ಸಚಿವ ಎಂದು ನನಗೆ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ಸರ್ಟಿಫಿಕೇಟ್‌ ನೀಡಿರುವುದು ಸಂತೋಷ. ಇದರಿಂದ ನಾನು ವಿಚಲಿತನಾಗಿಲ್ಲ. ನಾನು 3 ಬಾರಿ ಗೃಹ ಸಚಿವನಾಗಿದ್ದೇನೆ. ನನ್ನ ಕಾರ್ಯಶೈಲಿಯನ್ನು ರಾಜ್ಯದ ಜನರು ನೋಡಿದ್ದಾರೆ. ಪ್ರತಿಪಕ್ಷ ನಾಯಕರ ಹೇಳಿಕೆಗೆ ಅವರದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಕ್ಕೆ ನನಗೆ ಗೊತ್ತು. ಆದರೆ ನಾನು ಆ ಮಾರ್ಗ ಹಿಡಿಯುವುದಿಲ್ಲ.
– ಡಾ| ಜಿ.ಪರಮೇಶ್ವರ್‌, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next