Advertisement

ಗುಜರಾತ್‌: ಸ್ಪಷ್ಟ ರಣತಂತ್ರದೊಂದಿಗೆ ಅಖಾಡಕ್ಕಿಳಿದ ಬಿಜೆಪಿ

05:10 PM May 02, 2022 | Team Udayavani |
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದಿಯಾಗಿ ಪಕ್ಷದ ಕೇಂದ್ರ ನಾಯಕರು ಪದೇಪದೆ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವುದರ ಜತೆಯಲ್ಲಿ ರಾಜ್ಯ ನಾಯಕರಿಗೆ ತಿಳಿ ಹೇಳುವ ಮತ್ತು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ನಡೆಸುತ್ತಲೇ ಬಂದಿದ್ದಾರೆ. ಕಳೆದ 2-3 ವಾರಗಳ ಅವಧಿಯಲ್ಲಿ ಕೇಂದ್ರ ಸಚಿವರಾದ ಭೂಪೇಂದರ್‌ ಯಾದವ್‌, ಮನ್‌ಸುಖ್‌ ಮಾಂಡವಿಯಾ, ಅನುರಾಗ್‌ ಠಾಕೂರ್‌ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿಯ ಹಾಲಿ ಸ್ಥಿತಿಗತಿಗಳನ್ನು ಪರಿಶೀಲಿಸಿ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಕೇಂದ್ರ ಸಚಿವರು ಮತ್ತು ಪಕ್ಷದ ವರಿಷ್ಠ ನಾಯಕರ...
Now pay only for what you want!
This is Premium Content
Click to unlock
Pay with

ದೇಶದ ರಾಜಕೀಯಕ್ಕೆ ಹೊಸ ಭಾಷ್ಯ ಬರೆದ ಗುಜರಾತ್‌ನಲ್ಲೀಗ ನಿಧಾನಗತಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರ ಲಾರಂಭಿಸಿವೆ. ಇದೇ ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಈಗಾಗಲೇ ಪ್ರಚಾರಕ್ಕೆ ಚಾಲನೆ ನೀಡಿದ್ದರೆ ವಿಪಕ್ಷ ಕಾಂಗ್ರೆಸ್‌ ಇನ್ನಷ್ಟೇ ಮೈಕೊಡವಿಕೊಳ್ಳಬೇಕಿದೆ. ಆದರೆ ಆಮ್‌ ಆದ್ಮಿ ಪಾರ್ಟಿ ಈ ಬಾರಿ ರಾಜ್ಯ ವಿಧಾನಸಭೆಯ ಚುನಾವಣೆಯ ಮೇಲೆ ದೃಷ್ಟಿ ನೆಟ್ಟಿದ್ದು ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್‌ ಅವರು ಪದೇಪದೆ ರಾಜ್ಯಕ್ಕೆ ಭೇಟಿ ನೀಡುವ ಮೂಲಕ ರಾಜ್ಯದಲ್ಲಿ ಪಕ್ಷದ ಬಲವರ್ಧನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಿಜೆಪಿಯ ಮಟ್ಟಿಗೆ ತವರೆಂದೇ ಪರಿಗಣಿಸಲ್ಪಟ್ಟಿರುವ ಗುಜರಾತ್‌ನ ಮೇಲಣ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ರಣತಂತ್ರ ರೂಪಿಸಿ, ಕಾರ್ಯೋನ್ಮುಖವಾಗಿದೆ.

Advertisement

ದೇಶದಲ್ಲಿ ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ನಡೆದ ಪಂಚರಾಜ್ಯ ಗಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡಿ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್‌ ವಿಧಾನಸಭೆ ಚುನಾವಣೆಯ ಪ್ರಚಾರದ ಕಹಳೆಯನ್ನು ಊದಿದ್ದರು. ಇದಾದ ಬಳಿಕ ನಿರಂತರವಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಮುಂಬರುವ ಚುನಾವಣೆಗೆ ಸನ್ನದ್ಧಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಚುನಾವಣೆಗೆ ಇನ್ನೂ ಆರು ತಿಂಗಳು ಇದ್ದರೂ ಪಕ್ಷ ಮಾತ್ರ ತನ್ನ ಎಂದಿನ ಮಾದರಿಯಲ್ಲಿ ಚುನಾವಣ ಕಾರ್ಯತಂತ್ರ ರೂಪಣೆ, ಸಂಘಟನೆಯ ಬಲವರ್ಧನೆ ಕಾರ್ಯದಲ್ಲಿ ತಲ್ಲೀನವಾಗಿದೆ. ಕಳೆದೆರಡು ವಿಧಾನಸಭೆ ಚುನಾವಣೆಗಳಲ್ಲಿ ಅಂದರೆ 2012 ಮತ್ತು 2017ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ನಿಚ್ಚಳ ಬಹುಮತ ಗಳಿಸಲು ಸಫ‌ಲವಾಗಿತ್ತು. 2017ರ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆಗೈಯ್ಯುವಲ್ಲಿ ಎಡವಿದ್ದೇ ಅಲ್ಲದೆ ಒಟ್ಟಾರೆ ಸದಸ್ಯರ ಸಂಖ್ಯೆಯಲ್ಲಿ ಇಳಿಕೆ ಕಾಣುವಂತಾಗಿತ್ತು. ಇನ್ನು ವಿಪಕ್ಷ ಕಾಂಗ್ರೆಸ್‌ ತನ್ನ ಒಟ್ಟಾರೆ ಸದಸ್ಯ ಬಲವನ್ನು ವೃದ್ಧಿಸಿಕೊಂಡು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಇದು ತಾತ್ಕಾಲಿಕ ಬೆಳವಣಿಗೆಗಳಾಯಿತೇ ಹೊರತು ಆ ಬಳಿಕ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ತನ್ನ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳುವಲ್ಲಿ ಸಫ‌ಲವಾಗಿತ್ತು.

ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿನ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದ್ದು ಇದಕ್ಕಾಗಿ ಈಗಿನಿಂದಲೇ ಸಜ್ಜಾಗುತ್ತಿದೆ. ಪ್ರತಿಯೊಂದೂ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷ ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷದ ಅಭ್ಯರ್ಥಿಯ ಗೆಲುವನ್ನು ಖಾತರಿಪಡಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಜಯಗಳಿಸಿ ಭರ್ಜರಿ ಬಹುಮತ ದೊಂದಿಗೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಬಿಜೆಪಿ ಗ್ರಾಮೀಣ ಕ್ಷೇತ್ರಗಳು ಮಾತ್ರವಲ್ಲದೆ 2017ರ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಕ್ಷೇತ್ರಗಳು ಅದರಲ್ಲೂ ಮುಖ್ಯವಾಗಿ ಕಳೆದ ಐದು ದಶಕಗಳ ಅವಧಿಯಲ್ಲಿ ಪಕ್ಷದ ಪಾಲಿಗೆ ಸವಾಲಿನ ಕ್ಷೇತ್ರಗಳಾಗಿ ಪರಿಗಣಿಸಲ್ಪಟ್ಟಿರುವ 57 ಕ್ಷೇತ್ರಗಳತ್ತ ಹೆಚ್ಚಿನ ಲಕ್ಷ್ಯ ಹರಿಸಲು ನಿರ್ಧರಿಸಿದ್ದು ಈ ದಿಸೆಯಲ್ಲಿ ಈಗಾಗಲೇ ಮುಂದಡಿ ಇರಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು ಇದಕ್ಕಾಗಿ ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ರಾಜ್ಯದ ಚುನಾವಣೆಗಳಲ್ಲಿ ಮುಖ್ಯವಾಗಿ ವಿಧಾನಸಭೆ ಚುನಾವಣೆಯಲ್ಲಿ ಸಮಾಜದ ಒಂದು ವರ್ಗ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿದ್ದು ಈ ಬಾರಿ ಆ ವರ್ಗವನ್ನೂ ಪಕ್ಷದತ್ತ ಆಕರ್ಷಿಸಿ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸುವುದೇ ಅಲ್ಲದೆ ಗೆಲುವಿನ ಅಂತರವನ್ನೂ ಹೆಚ್ಚಿಸಲು ಗಮನ ಕೇಂದ್ರೀಕರಿಸಲಾಗಿದೆ.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮುಂದಿನ 15 ದಿನಗಳ ಅವಧಿಯಲ್ಲಿ ಬಿಜೆಪಿ ರಾಜ್ಯಾದ್ಯಂತ “ವಿಸ್ತಾರಕ ಯೋಜನಾ’ ಅಭಿಯಾನವನ್ನು ಹಮ್ಮಿಕೊಳ್ಳಲು ಮುಂದಾಗಿದೆ. ಈ ಅಭಿಯಾನದ ಉಸ್ತುವಾರಿಯನ್ನು ಪಕ್ಷದ ಹಿರಿಯ ಪದಾಧಿಕಾರಿಗಳು ಅದರಲ್ಲೂ ಮುಖ್ಯವಾಗಿ ಆರ್‌ಎಸ್‌ಎಸ್‌ ಹಿನ್ನೆಲೆಯ ನಾಯಕರಿಗೆ ವಹಿಸಲಾಗಿದೆ. ಈ ಅಭಿಯಾನದಡಿ ಪ್ರತೀ ಜಿಲ್ಲೆಯ ಪ್ರತೀ ವಾರ್ಡ್‌, ಮಂಡಲದ ವ್ಯಾಪ್ತಿಯಲ್ಲಿ ಪಕ್ಷದ ಸದ್ಯದ ಸ್ಥಿತಿಗತಿಗಳ ಪರಿಶೀಲನೆಯ ಜತೆಯಲ್ಲಿ ಪಕ್ಷದ ಕಾರ್ಯಕರ್ತರ ಅಹವಾಲನ್ನು ಆಲಿಸಲು ನಿರ್ಧರಿಸಲಾಗಿದೆ.

Advertisement

ರಾಜ್ಯದ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ 2017ಕ್ಕಿಂತ ಈ ಬಾರಿ ಬಿಜೆಪಿಯ ಸ್ಥಿತಿಗತಿ ಚೆನ್ನಾಗಿದ್ದು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಆದರೂ ರಾಜ್ಯದಲ್ಲಿ ಬೇರೂರುತ್ತಿ ರುವ ಆಮ್‌ ಆದ್ಮಿ ಪಾರ್ಟಿ ಮತ್ತು ವಿಪಕ್ಷ ಕಾಂಗ್ರೆಸ್‌ ಅನ್ನು ಸಂಪೂರ್ಣ ವಾಗಿ ಅವಗಣಿಸುವಂತಿಲ್ಲ ಎಂಬ ಎಚ್ಚರಿಕೆಯನ್ನೂ ರಾಜಕೀಯ ವಿಶ್ಲೇಷಕರು ನೀಡಿದ್ದು ಪಕ್ಷ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದಿಯಾಗಿ ಪಕ್ಷದ ಕೇಂದ್ರ ನಾಯಕರು ಪದೇಪದೆ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುವುದರ ಜತೆಯಲ್ಲಿ ರಾಜ್ಯ ನಾಯಕರಿಗೆ ತಿಳಿ ಹೇಳುವ ಮತ್ತು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ನಡೆಸುತ್ತಲೇ ಬಂದಿದ್ದಾರೆ. ಕಳೆದ 2-3 ವಾರಗಳ ಅವಧಿಯಲ್ಲಿ ಕೇಂದ್ರ ಸಚಿವರಾದ ಭೂಪೇಂದರ್‌ ಯಾದವ್‌, ಮನ್‌ಸುಖ್‌ ಮಾಂಡವಿಯಾ, ಅನುರಾಗ್‌ ಠಾಕೂರ್‌ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿಯ ಹಾಲಿ ಸ್ಥಿತಿಗತಿಗಳನ್ನು ಪರಿಶೀಲಿಸಿ ತೆರಳಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್‌ ಶಾ ಆದಿಯಾಗಿ ಕೇಂದ್ರ ಸಚಿವರು ಮತ್ತು ಪಕ್ಷದ ವರಿಷ್ಠ ನಾಯಕರುರಾಜ್ಯಕ್ಕೆ ನಿರಂತರವಾಗಿ ಭೇಟಿ ನೀಡಿ ಪಕ್ಷದ ಪ್ರಚಾರಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ.

2017ರ ಚುನಾವಣೆಯಲ್ಲಿ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳ 141 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದ 76 ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲು ಬಿಜೆಪಿ ನಿಶ್ಚಯಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸೌರಾಷ್ಟ್ರದಲ್ಲಿ ಉತ್ತಮ ಸಾಧನೆ ತೋರಿದ್ದರೆ ಉತ್ತರ ಮತ್ತು ಮಧ್ಯ ಗುಜರಾತ್‌ನ ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ವಿಫ‌ಲವಾಗಿತ್ತು. ಇಲ್ಲಿನ 30 ಸ್ಥಾನಗಳ ಪೈಕಿ ಪ್ರತೀ ಆರು ಸ್ಥಾನಗಳಲ್ಲಿ ಒಂದರಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಅಂತರ ನೋಟಾ ಮತಗಳಿಗಿಂತಲೂ ಕಡಿಮೆಯಾ ಗಿತ್ತು. ಇದೇ ವೇಳೆ ಬಿಜೆಪಿ ನಗರ ಪ್ರದೇಶದ 38 ಸ್ಥಾನಗಳ ಪೈಕಿ 34ರಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಕ್ಲೀನ್‌ ಸ್ವೀಪ್‌ ಮಾಡುವ ವಿಶ್ವಾಸ ಪಕ್ಷದ್ದಾಗಿದೆ.

2017ರ ಚುನಾವಣೆಯಲ್ಲಿ ಬಿಜೆಪಿಯ ಒಟ್ಟಾರೆ ಮತಗಳಿಕೆ ಪ್ರಮಾಣ ಶೇ. 49.1ರಷ್ಟಾಗಿದ್ದರೆ ಕಾಂಗ್ರೆಸ್‌ನದು ಶೇ. 42.1ರಷ್ಟಾ ಗಿತ್ತು. ಸಹಜವಾಗಿಯೇ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸರಿ ಸುಮಾರು 32 ವರ್ಷಗಳ ಬಳಿಕ ಹೆಚ್ಚಿನ ಸದಸ್ಯ ಬಲವನ್ನು ಹೊಂದಲು ಸಾಧ್ಯವಾಗಿತ್ತು. ಈ ಕಾರಣದಿಂದಾಗಿಯೇ ಈ ಬಾರಿ ಬಿಜೆಪಿ ಮತಗಳಿಕೆ ಪ್ರಮಾಣ ಮತ್ತು ಗೆಲುವಿನ ಅಂತರ ಇವೆರಡನ್ನೂ ಹೆಚ್ಚಿಸಿಕೊಳ್ಳುವ ಮೂಲಕ ಗೆಲುವನ್ನು ಮತ್ತಷ್ಟು ಸುಲಭಸಾಧ್ಯವನ್ನಾಗಿಸಲು ಕಾರ್ಯತಂತ್ರ ಹೆಣೆದಿದೆ. ಇನ್ನು ಜಾತಿ, ಸಮುದಾಯವಾರು ಮತಬ್ಯಾಂಕ್‌ನ್ನು ಅವಲೋಕಿಸಿದರೆ ಗುಜರಾತ್‌ನಲ್ಲಿ ಬ್ರಾಹ್ಮಣರು, ರಜಪೂತ ಸಮುದಾಯ ಬಿಜೆಪಿಯ ಖಾಯಂ ಮತದಾರರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷ ಪಾಟಿದಾರ್‌ ಮತ್ತು ಒಬಿಸಿ ಸಮುದಾಯದ ಮತವಿಭಜನೆಯಿಂದಾಗಿ ತುಸು ಹಿನ್ನಡೆ ಅನುಭವಿಸುವಂತಾಗಿತ್ತು. ಆದರೆ ಇದೀಗ ಒಬಿಸಿ, ಎಸ್‌ಸಿ-ಎಸ್‌ಟಿ ಸಮುದಾಯದವರನ್ನು ತನ್ನತ್ತ ಸೆಳೆ ಯುವಲ್ಲಿ ಬಿಜೆಪಿ ಯಶ ಕಂಡಿದ್ದು ಇದು ಮುಂದಿನ ಚುನಾ ವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸಲು ನೆರವಾಗಲಿದೆ. ಇನ್ನು ನಾಯಕತ್ವ ಕೊರತೆಯಿಂದ ದಿಕ್ಕಾಪಾಲಾಗಿ ಹೋಗಿ ರುವ ವಿಪಕ್ಷ ಕಾಂಗ್ರೆಸ್‌ನಲ್ಲಿ ಮತ್ತೆ ಬಂಡಾಯ ಹೊಗೆಯಾಡಲಾರಂಭಿಸಿದೆ. ಇದು ಕೂಡ ಬಿಜೆಪಿ ಪಾಲಿಗೆ ಧನಾತ್ಮಕ ಅಂಶವೇ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸ್ಥಿರ ಮತ್ತು ಅಭಿವೃದ್ಧಿ ಪರ ಆಡಳಿತ ನೀಡುತ್ತ ಬಂದಿದ್ದರೂ ಬೆಲೆ ಏರಿಕೆ, ಹಣದುಬ್ಬರ, ಕಾರ್ಪೊರೇಟ್‌ ಕಂಪೆನಿಗಳ ಪರ ಹೆಚ್ಚಿನ ಒಲವು, ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ, ಜನಹಿತ, ದೂರಗಾಮಿ ಪರಿ ಣಾಮ, ರಾಷ್ಟ್ರೀಯತೆಯ ಲೇಪ ಹಚ್ಚಿ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೇಳಿಬರ ತೊಡಗಿರುವ ಭ್ರಷ್ಟಾಚಾರ ಹಗರಣಗಳು ಮುಂಬರುವ ದಿನಗಳಲ್ಲಿ ಬಿಜೆಪಿ ಪಾಲಿಗೆ ಒಂದಿಷ್ಟು ಸವಾಲೊಡ್ಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇವೆಲ್ಲದರತ್ತ ಬಿಜೆಪಿ ತನ್ನ ದೃಷ್ಟಿ ಹರಿಸಿದ್ದೇ ಆದಲ್ಲಿ ಗುಜರಾತ್‌ನಲ್ಲಿನ ಬಿಜೆಪಿಯ ಭದ್ರಕೋಟೆಯನ್ನು ನುಸುಳುವುದು ವಿಪಕ್ಷಗಳ ಪಾಲಿಗೆ ಹರಸಾಹಸವೇ ಸರಿ.

– ಹರೀಶ್‌ ಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.