ಮೈಸೂರು: ಮಂಡ್ಯ ಮತ್ತು ಹಾಸನ ಕ್ಷೇತ್ರಗಳಲ್ಲಿನ ಜೆಡಿಎಸ್‌ನವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ಮಾಡಿಸಿ, ಕೊಡಬಾರದ ಕಿರುಕುಳ ಕೊಡುತ್ತಿರುವ ಬಿಜೆಪಿಯವರಿಗೆ ಮತ ಹಾಕದೆ ತಕ್ಕಪಾಠ ಕಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ಪುತ್ರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಬೋಗಾದಿ, ದಾಸನಕೊಪ್ಪಲು, ಮರಟಿಕ್ಯಾತನಹಳ್ಳಿ, ಗೋಪಾಲಪುರ, ಹೂಟಗಳ್ಳಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಗೆಲ್ಲಿಸಿ: ಬಿಜೆಪಿ ಅಭ್ಯರ್ಥಿ ಪ್ರತಾಪ್‌ಸಿಂಹಗೆ ಒಂದೇ ಒಂದು ಮತವನ್ನೂ ಹಾಕದೆ, ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್‌ರಿಗೆ ಮತ ನೀಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದರು.
ಗೊಂದಲ ಬೇಡ: ಮತದಾರರು ಯಾವುದೇ ಗೊಂದಲಗಳಿಗೆ ಒಳಗಾಗದೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮನವಿಯಂತೆ ಪ್ರಾಮಾಣಿಕವಾಗಿ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್‌ರಿಗೆ ಮತಚಲಾಯಿಸಬೇಕು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿರಬೇಕಾದರೆ ಎಚ್.ಡಿ.ದೇವೇಗೌಡರು ಮತ್ತು ಸಿದ್ದರಾಮಯ್ಯನವರ ಕೈ ಬಲಪಡಿಸಬೇಕಾದರೆ ಮೈತ್ರಿ ಅಭ್ಯರ್ಥಿ ಗೆಲ್ಲಿಸಬೇಕೆಂದರು.
ಬಹುಮತ ನೀಡಿ: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ರಾಜ್ಯದಲ್ಲಿ ಮೈತ್ರಿಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರದ ಮೋದಿ ಸರ್ಕಾರ ಪ್ರಯತ್ನಿಸುತ್ತಲೇ ಇದೆ. ರಾಜ್ಯದಲ್ಲಿ 20 ಲೋಕಸಭಾಕ್ಷೇತ್ರಗಳನ್ನು ನಾವು ಗೆದ್ದರೆ ಕುಮಾರಸ್ವಾಮಿ ಅವರ ಸರ್ಕಾರವೂ ಸುಭದ್ರವಾಗಿರುತ್ತದೆ.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎಚ್.ಡಿ. ದೇವೇಗೌಡರು ಮತ್ತು ರಾಹುಲ್‌ಗಾಂಧಿ ಅವರ ಕೈ ಬಲಗೊಳ್ಳುತ್ತದೆ. ಹೀಗಾಗಿ ಬಡವರ ವಿರೋಧಿ, ಸಂವಿಧಾನ ವಿರೋಧಿ ಸರ್ಕಾರ ಕಿತ್ತೂಗೆಯಲು ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರನ್ನು ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸಿ.ಎನ್.ಮಂಜೇಗೌಡ, ಕೃಷ್ಣಕುಮಾರ್ ಸಾಗರ್, ಗುರುಪಾದಸ್ವಾಮಿ, ಜಿ.ಕೆ.ಬಸವಣ್ಣ, ಕೆಂಚಪ್ಪ, ಬೋಗಾದಿ ನಾಗರಾಜು, ಸ್ವಾಮಿ, ಡೇರಿ ಅಧ್ಯಕ್ಷ ಗುರುಸ್ವಾಮಿ, ಅಂದಾನಿ, ಗಂಗಾಧರಗೌಡ, ಜಯರಾಮೇಗೌಡ, ಗ್ರಾಪಂ ಅಧ್ಯಕ್ಷ ಮಲ್ಲೇಶ ಇದ್ದರು.