ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದಲ್ಲಿ ಎಲ್ಲವೂ ಸರಿಯಾಗಿದೆ ಎಂದುಕೊಳ್ಳುವಷ್ಟರಲ್ಲೇ ಮತ್ತೆ ಭಿನ್ನರಾಗ ಕೇಳಿ ಬಂದಿದೆ. ಉಪಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ನಾಯಕರ ನಡುವಿನ ಮುನಿಸು ಮತ್ತೂಮ್ಮೆ ಬಹಿರಂಗವಾಗಿದೆ.
ಈ ಹಿಂದೆ ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದ ಹಿರಿಯ ಮುಖಂಡ ಭಾನುಪ್ರಕಾಶ್ ತಮಗೆ ನೀಡಿರುವ ಉಪಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವುದಿಲ್ಲ ಎನ್ನುವ ಮೂಲಕ ರಾಜ್ಯಾಧ್ಯಕ್ಷ ಯಡಿಯೂರಪ್ಪ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನನ್ನನ್ನು ಯಾವ ಕಾರಣಕ್ಕಾಗಿ ಉಪಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿತ್ತು ಎಂಬುದು ತಿಳಿದಿಲ್ಲ. ಈಗ ಏಕಾಏಕಿ ಅದೇ ಸ್ಥಾನದಲ್ಲಿ ಮುಂದುವರಿಯುವಂತೆ ಸೂಚಿಸಲಾಗಿದೆ.
ನಾನು ಯಾವುದೇ ಸ್ಥಾನಮಾನಕ್ಕೂ ಎಂದಿಗೂ ಆಸೆ ಪಟ್ಟವನಲ್ಲ. ಹೀಗಾಗಿ ಈಗ ಕೊಟ್ಟಿರುವ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಬಹಿರಂಗ ಮಾಡಬಾರದೆಂದು ಸುಮ್ಮನಿದ್ದೆ.
ನಾಳೆ ಫಲಿತಾಂಶ ಪ್ರಕಟಗೊಂಡ ಬಳಿಕ ಹೇಳಿದರೆ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕಾರಣಕ್ಕೆ ಮುಂಚಿತವಾಗಿ ಹೇಳಿದ್ದೇನೆ. ಬಿಜೆಪಿಯಲ್ಲಿ ಎಂದಿಗೂ ಲೆಟರ್ ಸಂಸ್ಕೃತಿ ಇಲ್ಲ. ಹಿಂದೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ಕೇರಳದಲ್ಲಿ ಅಧ್ಯಕ್ಷರಾಗಿದ್ದ ವೇಳೆ ಅವರಿಗೆ ವೇದಿಕೆಯಲ್ಲಿ ಹಾರ ಹಾಕಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಪತ್ರ ವ್ಯವಹಾರ ಬಿಜೆಪಿಯಲ್ಲಿ ನಡೆಸಬಾರದು ಎಂಬ ಕಾರಣಕ್ಕಾಗಿ ಇಂತಹ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದರು.