ಹೊಸದಿಲ್ಲಿ : ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೊರೆದಿದ್ದ ತೇಜಸ್ವಿನಿ ಗೌಡ ಅವರು ಶನಿವಾರ ಮಾತೃಪಕ್ಷ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿಗೆ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಲ್ಲಿ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮತ್ತು ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 2004 ಮತ್ತು 2009 ರ ವರೆಗೆ ಕಾಂಗ್ರೆಸ್ ಸಂಸದೆ ಯಾಗಿದ್ದ ತೇಜಸ್ವಿನಿ 2014 ರಲ್ಲಿ ಬಿಜೆಪಿ ಸೇರಿದ್ದರು.
”ಕರ್ನಾಟಕದ ರಾಜಕೀಯದಲ್ಲಿ ಸಕ್ರಿಯ ನಾಯಕಿ ತೇಜಸ್ವಿನಿ ಗೌಡ ಅವರನ್ನು ನಾವು ಕಾಂಗ್ರೆಸ್‌ಗೆ ಸ್ವಾಗತಿಸುತ್ತೇವೆ. ತೇಜಸ್ವಿನಿ ಅವರು ಮುಂಬರುವ ಚುನಾವಣೆಯಲ್ಲಿ ಸಕ್ರಿಯರಾಗುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ತೇಜಸ್ವಿನಿ ಅವರು 2004 ಮತ್ತು 2009 ರ ನಡುವೆ ಕಾಂಗ್ರೆಸ್ ಸಂಸದರಾಗಿದ್ದರು ಮತ್ತು ವಿವಿಧ ವಿಷಯಗಳ ಬಗ್ಗೆ ಧ್ವನಿ ಎತ್ತಿದ್ದರು. ಅವರು ಕಾಂಗ್ರೆಸ್‌ಗೆ ಮರಳಿರುವುದು ನಮಗೆ ಸಂತಸ ತಂದಿದೆ” ಎಂದು
ಜೈರಾಮ್ ರಮೇಶ್ ಹೇಳಿದರು.
”ಕಾಂಗ್ರೆಸ್ ಕೇವಲ ಮಾತನ್ನು ನಂಬದೆ ಕ್ರಿಯೆಯಲ್ಲಿ ನಂಬಿಕೆ ಇಟ್ಟಿದೆ. ನಾವು ನೋಡಲು ಇತಿಹಾಸವಿದೆ. ಇದು ಉತ್ತಮ ಸಮಯ, ಮತ್ತು ಪ್ರಾಮಾಣಿಕತೆಯಿಂದ, ನಾನು ಪಕ್ಷಕ್ಕಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಬಿಜೆಪಿಗೆ ಸಾಂವಿಧಾನಿಕ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಇಲ್ಲ” ಎಂದು ತೇಜಸ್ವಿನಿ ಆರೋಪಿಸಿದರು. ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ 23 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ತೇಜಸ್ವಿನಿ ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ.ಶಿವ ಕುಮಾರ್ ಅವರು ಪತ್ರಕರ್ತೆಯಾಗಿದ್ದ ತೇಜಸ್ವಿನಿ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಕರೆತಂದು 2004ರಲ್ಲಿ ಕನಕಪುರ ಕ್ಷೇತ್ರದಿಂದ(ಇಂದು ಬೆಂಗಳೂರು ಗ್ರಾಮಾಂತರ) 14 ನೇ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣ್ಣಕ್ಕಿಳಿಸಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಸೋಲುಣಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ಬಿಜೆಪಿ ಸೇರಿದ ಬಳಿಕ ಪಕ್ಷದ ವಕ್ತಾರೆಯಾಗಿಯೂ ಕೆಲಸ ಮಾಡಿದ್ದರು.