ಕನಕಪುರ: ಬಿಜೆಪಿ ಸರ್ಕಾರ ಮೀಸಲಾತಿ ರದ್ದುಗೊಳಿಸಿ ಸಂವಿಧಾನವನ್ನು ತೆಗೆದುಹಾಕಲಿದೆ ಎಂದು ಕೆಲವರು ತಮ್ಮ ಓಟ್ ಬ್ಯಾಂಕ್ ಉಳಿಸಿ ಕೊಳ್ಳಲು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಶಿವನಹಳ್ಳಿ ಸಮೀಪ ನಡೆದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರನ್ನು ಬಿಜೆಪಿ ಎಲ್ಲಿಯೂ ವಿರೋಧಿಸಿಲ್ಲ. ಸಂವಿಧಾನ ಮತ್ತು ಮೀಸಲಾತಿ ತೆಗೆಯುವುದಾಗಿ ಬಿಜೆಪಿ ಎಲ್ಲೂ ಹೇಳಿಲ್ಲ. ಬಿಜೆಪಿ ದಲಿತ ಮತ್ತು ಮುಸ್ಲಿಮರ ವಿರೋಧಿಯಲ್ಲ. ಆದರೆ, ಇಡೀ ರಾಷ್ಟ್ರದಲ್ಲಿ ಬಿಜೆಪಿ ಅಲೆ ಕಂಡು ತಮ್ಮ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಕೆಲವರು ಕುತಂತ್ರದಿಂದ, “ಬಿಜೆಪಿ ಪಕ್ಷ ದಲಿತ ಮತ್ತು ಅಂಬೇಡ್ಕರ್ ವಿರೋಧಿ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಮೀಸಲಾತಿ ರದ್ದುಗೊಳಿಸುವುದಿಲ್ಲ: ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸುವ ಪ್ರಶ್ನೆಯಿಲ್ಲ. ಇಂದು ದೇಶದಲ್ಲಿ ಮುಸ್ಲಿಮರು ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಬಿಜೆಪಿ ಕಾರಣ. ಈವರೆಗೂ ಒಂದು ವ್ಯವಸ್ಥೆಯನ್ನು ಕಂಡಿದ್ದೇವೆ. ಮತ್ತೆ ಅದೇ ವ್ಯವಸ್ಥೆಯಲ್ಲಿ ನಮ್ಮ ಬದಲಾವಣೆ ಸಾಧ್ಯವಿಲ್ಲ. ಕಾಂಗ್ರೆಸ್ ನಮ್ಮನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದೆ. ರಾಮನಗರ ಜಿಲ್ಲೆಯಿಂದ ಒಬ್ಬ ದಲಿತ ಮುಖಂಡ ಜಿಲ್ಲಾ ಮತ್ತು ರಾಜ್ಯಮಟ್ಟದ ನಾಯಕರಾಗಿ ಬೆಳೆದಿಲ್ಲ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ಧಾಳಿ: ಕಾಂಗ್ರೆಸ್ ಅಧಿಕಾರದಿಂದ ದೂರ ಉಳಿದಾಗ ದೇಶದಲ್ಲಿಗಲಭೆಗಳು ಸೃಷ್ಟಿಯಾಗುತ್ತವೆ. ಕನಕಪುರದ ನಾಯ ಕರು ತಮ್ಮ ಭೂಮಿಯಲ್ಲಿ ಚಿನ್ನ ಬೆಳೆಯುತ್ತಾರಂತೆ ಹೌದಾ?. ಎಲ್ಲ ಸುಳ್ಳು. ರಸ್ತೆ ಕಾಮಗಾರಿಗೆ ಬರಬೇಕಾದ ಹಣ ನೇರವಾಗಿ ಅವರ ಮನೆ ಸೇರಿ, ಸಿಕ್ಕಿಬಿದ್ದಿದ್ದಾರೆಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಮತ್ತು ಡಿ. ಕೆ.ಸುರೇಶ್ ವಿರುದ್ಧ ಹರಿಹಾಯ್ದರು. ಬಿಜೆಪಿ ಎಸ್ಸಿ ಮೊರ್ಚಾ ವಿಭಾಗ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾಧ್ಯಕ್ಷ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಲೆ ರಾಜು, ಅಚ್ಚಲುರಾಜು, ಶೇಖರ್, ತಾಲೂಕು ಅಧ್ಯಕ್ಷ ಶಿವಮುತ್ತು, ಉಪಾಧ್ಯಕ್ಷಮದೆಶ್, ವೆಂಕಟೆಶ್, ನಂಜುಂಡ, ದೇವರಾಜು, ಚಂದ್ರಕಾಂತ್ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ :
ದಲಿತ ಸಂಘಟನೆಗಳು ದಾರಿ ತಪ್ಪುತ್ತಿವೆ. ನಮ್ಮನ್ನು ವಿರೋಧಿಸಲೆಂದೇ ಕೆಲವು ಸಂಘಟನೆಗಳು ಕೆಲಸ ಮಾಡುತ್ತಿವೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಜನರು ಬಿಜೆಪಿಯನ್ನು ಅರಿತುಕೊಂಡಿದ್ದಾರೆ. ಕೆಲವರು ಸಮಯ, ಸಂದರ್ಭ ಬಳಸಿಕೊಂಡು ಅಪಪ್ರಚಾರ ಮಾಡುತ್ತಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ನಾರಾಯಣ ಸ್ವಾಮಿ ಕರೆ ನೀಡಿದರು.