Advertisement

BJP: ಬಿಜೆಪಿ ಜಿಲ್ಲಾಧ್ಯಕ್ಷ ಗಾದಿಗೆ ಬಿರುಸಿನ ಲಾಬಿ 

02:47 PM Nov 20, 2023 | Team Udayavani |

ರಾಮನಗರ: ರಾಜ್ಯಾಧ್ಯಕ್ಷ ಬದಲಾವಣೆ ಮತ್ತು ವಿಪಕ್ಷ ನಾಯಕನ ಆಯ್ಕೆಯೊಂದಿಗೆ ಅಲರ್ಟ್‌ ಆಗಿರುವ ಕಮಲ ಪಡೆ ಇದೀಗ ಪಕ್ಷದ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಿದೆ ಎಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯ ಆಕಾಂಕ್ಷಿಗಳು ಅಲರ್ಟ್‌ ಆಗಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಪ್ರಮುಖ ನಾಯಕರು ತೆರೆ ಮರೆಯಲ್ಲಿ ಲಾಭಿ ನಡೆಸಲು ಆರಂಭಿ ಸಿದ್ದಾರೆ. ಜಿಲ್ಲಾ ಬಿಜೆಪಿ ಪಾಳಯದಲ್ಲಿ ಮುಂದಿನ ಅಧ್ಯಕ್ಷ ಯಾರು ಎಂಬ ಚರ್ಚೆ ಇದೀಗ ಬಿರುಸು ಗೊಂಡಿದೆ.

Advertisement

ಹಿಂದೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಠೇವಣಿ ಉಳಿಸಿಕೊಳ್ಳುವುದೇ ಕಷ್ಟ ಎಂಬಂತ ಪರಿಸ್ಥಿತಿ ಇದ್ದಾಗ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಯನ್ನು ಕೇಳುವವರೇ ಇರಲಿಲ್ಲ. ಇದೀಗ ರಾಜ್ಯ ಮತ್ತು ರಾಷ್ಟ್ರದಲ್ಲಿ ಪಕ್ಷ ಪ್ರಬಲವಾಗಿರುವುದು, ಜೆಡಿಎಸ್‌ ಜೊತೆಗಿನ ಮೈತ್ರಿ ಬಳಿಕ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಒಂದಿಷ್ಟು ಶಕ್ತಿ ದೊರೆತಿರುವುದು ಬಿಜೆಪಿ ಪಾಳಯದ ನಾಯಕರನ್ನು ಹುರುಪು ಮೂಡಿಸಿದೆ. ಇದರಿಂದಾಗಿ ಜಿಲ್ಲಾಧ್ಯಕ್ಷ ಹುದ್ದೆಗೆ ಬೇಡಿಕೆ ಹೆಚ್ಚಾಗಿದೆ.

ಚನ್ನಪಟ್ಟಣದವರಾ ಹೊರಗಿನವರಾ..?: 2007ರಲ್ಲಿ ರಾಮನಗರ ಜಿಲ್ಲೆಯಾಗಿ ರಚನೆಯಾದ ಬಳಿಕ ಇದುವರೆಗೆ ಪಕ್ಷದ ಅಧ್ಯಕ್ಷರಾಗಿ ರುವವರಲ್ಲಿ ಚನ್ನಪಟ್ಟಣದವರೇ ಹೆಚ್ಚು. ಈಬಾರಿ ಚನ್ನಪಟ್ಟಣದ ಬಿಜೆಪಿ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಧ್ಯಕ್ಷ ಹುದ್ದೆಗೆ ಲಾಬಿ ನಡೆಸುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯ ಇತರ ಭಾಗದವರೂ ಜಿಲ್ಲಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಪಕ್ಷದ ವರೀಷ್ಟರ ಬಳಿ ಜಿಲ್ಲಾಧ್ಯಕ್ಷಗಾದಿ ಪಡೆದುಕೊಳ್ಳಲು ಇನ್ನಿಲ್ಲದ ಲಾಭಿ ನಡೆಸುತ್ತಿದ್ದಾರೆ. ಜಿಲ್ಲೆ ರಚನೆಯಾದ ಆರಂಭದಲ್ಲಿ ಕನಕಪುರ ನಾಗರಾಜು ಜಿಲ್ಲಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಬಳಿಕ ಸಿ.ಪಿ.ಯೋಗೇಶ್ವರ್‌, ಇವರ ಬಳಿಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಮಾದು, ಬಳಿಕ ಕನಕಪುರ ನಾಗರಾಜು, ಹುಲುವಾಡಿ ದೇವರಾಜು, ಕೆಆರ್‌ಡಿಐಬಿ ಮಾಜಿ ಅಧ್ಯಕ್ಷ ರುದ್ರೇಶ್‌, ಮತ್ತೆ ಹುಲುವಾಡಿ ದೇವರಾಜು ಜಿಲ್ಲಾಧ್ಯಕ್ಷ ಸ್ಥಾನವನ್ನು ಇದುವರೆಗೆ ಅಲಂಕರಿಸಿದ್ದಾರೆ. ಸದ್ಯಕ್ಕೆ ಹುಲುವಾಡಿ ದೇವರಾಜು ಅಧ್ಯಕ್ಷ ಸ್ಥಾನದಲ್ಲಿ ಇದ್ದು, ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಾಗಿ ರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲಿದ್ದಾರೆ ಎಂಬ ಮಾಹಿತಿಯ ಬೆನ್ನು ಹತ್ತಿ ಆಕಾಂಕ್ಷಿಗಳು ಅಲರ್ಟ್‌ ಆಗಿದ್ದಾರೆ.

ಈಬಾರಿ ಮತ್ತೆ ಚನ್ನಪಟ್ಟಣದವರಿಗೆ ಧ್ಯಕ್ಷ ಸ್ಥಾನ ದೊರೆಯುತ್ತದಾ ಇಲ್ಲಾ ಬೇರೆ ತಾಲೂಕಿಗೆ ಮನ್ನಣೆ ನೀಡುತ್ತಾರಾ ಎಂಬ ಚರ್ಚೆ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ. ಯೋಗೇಶ್ವರ್‌ ಬಿಜೆಪಿಯಲ್ಲಿರುವ ಕಾರಣ ಚನ್ನಪಟ್ಟಣದಲ್ಲಿ ಬಿಜೆಪಿ ಸಂಘಟನೆ ಬಲಿಷ್ಟವಾಗಿದೆ. ಹೀಗಾಗಿ ಚನ್ನಪಟ್ಟಣ ತಾಲೂಕಿನಿಂದ ಹೆಚ್ಚು ಮಂದಿ ಆಕಾಂಕ್ಷಿಗಳು ಇದ್ದಾರೆ. ಇವರ ಹೊರತಾಗಿ ರಾಮನಗರ, ಮಾಗಡಿ ತಾಲೂಕಿನವರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದ್ದು ಯಾರಿಗೆ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಫೈನಲ್‌ ಮಾಡೋರು ಯಾರು?: ರಾಮನಗರ ಜಿಲ್ಲೆಯಲ್ಲಿ ಯೋಗೇಶ್ವರ್‌ ಪ್ರಮುಖ ಬಿಜೆಪಿ ನಾಯಕರಾಗಿದ್ದು ಅವರ ಮಾತಿಗೆ ಬಿಜೆಪಿಯಲ್ಲಿ ಮೊದಲ ಪ್ರಾಶಸ್ತ್ಯ ಇತ್ತು. ಆದರೆ ಯಡಿಯೂರಪ್ಪ ಜೊತೆಗೆ ಇವರ ಸಂಬಂಧ ಹಳಸಿದ ಬಳಿಕ ಕೆಲಕಾಲ ರುದ್ರೇಶ್‌ ಪಕ್ಷದ ರಾಜ್ಯಘಟಕದಲ್ಲಿ ಪ್ರಾಮುಖ್ಯತೆ ಪಡೆದಿದ್ದರು. ಇದೀಗ ಯಡಿಯೂರಪ್ಪ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಯೋಗೇಶ್ವರ್‌ ಅವರ ಮಾತಿಗೆ ಮನ್ನಣೆ ಸಿಗುವುದಿಲ್ಲ ಎಂದು ಭಾವಿಸಿ ಕೆಲ ಮಂದಿ ನೇರವಾಗಿ ವಿಜಯೇಂದ್ರ ಸಂಪರ್ಕ ಸಾಧಿಸಿ ಜಿಲ್ಲಾಧ್ಯಕ್ಷ ಹುದ್ದೆಗೆ ಲಾಬಿ ಮಾಡಲು ಪ್ರಯತ್ನಿಸಿದ್ದರು. ಆದರೆ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾ ರಂಭದಲ್ಲಿ ಖುದ್ದು ಯೋಗೇಶ್ವರ್‌ ಪಾಲ್ಗೊಂಡು ವಿಜಯೇಂದ್ರ ಅವರನ್ನ ಅಭಿನಂದಿಸುವ ಜೊತೆಗೆ ಅತ್ಮೀಯವಾಗಿ ಅಪ್ಪಿಕೊಂಡಿರುವುದು, ಯೋಗೇಶ್ವರ್‌ ಗೆ ಟಾಂಗ್‌ ನೀಡಲು ಹೋಗಿದ್ದ ಮುಖಂಡರಿಗೆ ತುಸು ಇರುಸು ಮುರಿಸು ತಂದೊಡ್ಡಿದೆ. ನಮ್ಮ ಮೇಲೆ ಯೋಗೇಶ್ವರ್‌ ಕೆಂಗಣ್ಣು ಬೀರಬಹುದು ಎಂಬ ಭಯವೂ ಅವರನ್ನು ಬಿಟ್ಟು ಅಧ್ಯಕ್ಷ ಗಾದಿಗೆ ಲಾಭಿನಡೆಸುತ್ತಿದ್ದ ಮಂದಿಯನ್ನು ಕಾಡಲಾರಂಭಿಸಿದೆ.

Advertisement

ಜಿಲ್ಲೆಯಲ್ಲಿ ಯೋಗೇಶ್ವರ್‌ ಮಾತು ಅಂತಿಮವಾ, ವಿಪಕ್ಷದ ನಾಯಕರಾಗಿರುವ ಆರ್‌. ಅಶೋಕ್‌, ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಅಶ್ವತ್ಥ್ ನಾರಾಯಣ್‌, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ವಹಿಸಿಕೊಂಡಿದ್ದ ಅಶ್ವತ್ಥ್ನಾರಾಯಣಗೌಡ, ರುದ್ರೇಶ್‌ ಅವರ ಅಭಿಪ್ರಾಯವೂ ಮುಖ್ಯವಾಗುತ್ತದಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದು, ಜಿಲ್ಲಾಧ್ಯಕ್ಷ ಗಾದಿ ಯಾರಿಗೆ ಸಿಗಲಿದೆ.  ಜಿಲ್ಲೆಯ ಹಿಡಿತ ಯಾರಪಾಲಗಲಿದೆ ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ಅಧ್ಯಕ್ಷ ಸ್ಥಾನದಕ್ಕೆ ಆಕಾಂಕ್ಷಿಗಳ ಹಿಂಡು:

ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಡಜನ್‌ಗಟ್ಟಲೆ ಆಕಾಂಕ್ಷಿಗಳಿದ್ದಾರೆ. ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಕಳೆದಬಾರಿ ಸ್ಪರ್ಧೆಮಾಡಿ ಪರಾಜಿತರಾಗಿರುವ ಪ್ರಸಾದ್‌ಗೌಡ, ರಾಮನಗರ ಕ್ಷೇತ್ರದಿಂದ ಪರಾಜಿತ ಅಭ್ಯರ್ಥಿ ಗೌತಮ್‌ಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲೇಕೇರಿ ರವೀಶ್‌, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಂಪುರ ಮಲುವೇಗೌಡ, ಚನ್ನಪಟ್ಟಣ ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎನ್‌.ಆನಂದಸ್ವಾಮಿ, ಚನ್ನಪಟ್ಟಣ ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್‌, ಬಿಜೆಪಿ ಯುವ ಮುಖಂಡ ನರೇಂದ್ರ, ಬಿಡದಿ ಸ್ಮಾರ್ಟ್‌ಸಿಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವರದರಾಜು, ರಾಮನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಆರ್‌. ನಾಗರಾಜು, ಜಿಲ್ಲಾ ಬಿಜೆಪಿ ಪ್ರಧಾನಾ ಕಾರ್ಯದರ್ಶಿ ರುದ್ರದೇವರು, ಮಾಗಡಿ ರಾಜೇಶ್‌ ಹೀಗೆ ಸಾಕಷ್ಟು ಮಂದಿ ಪ್ರಬಲ ಆಕಾಂಕ್ಷಿ ಗಳಾಗಿದ್ದು, ರಾಜ್ಯ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ.

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next