ದಾವಣಗೆರೆ: ಮಹದಾಯಿ ಯೋಜನೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇದೀಗ ನೀಡುತ್ತಿರುವ ಹೇಳಿಕೆ ಗಮನಿಸಿದರೆ, ಯೋಜನೆಯ ಜಾರಿಗೆ ಬಿಜೆಪಿಯೇ ಅಡ್ಡಗಾಲು ಹಾಕಿದೆ ಎಂಬುದು ಸತ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ
ಡಿ. ಬಸವರಾಜ್ ಆರೋಪಿಸಿದ್ದಾರೆ.
ಶುಕ್ರವಾರ, ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮಹದಾಯಿ ಕುರಿತು ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿ, ಮುಖ್ಯಮಂತ್ರಿ ಇಲ್ಲದೆಯೂ ನಾನು ಮಹಾದಾಯಿ ಸಮಸ್ಯೆ ಇತ್ಯರ್ಥ ಮಾಡಬಲ್ಲೆ ಎಂದಿದ್ದಾರೆ. ಅಲ್ಲಿಗೆ ಬಿಜೆಪಿಯವರಿಂದಲೇ ಈ ಯೋಜನೆಗೆ ಅಡ್ಡಿಯಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ ಎಂದರು.
ರೈತರು, ಚಲನಚಿತ್ರ ನಟರು ಸೇರಿದಂತೆ ಅನೇಕ ಸಂಘ, ಸಂಸ್ಥೆ, ಸಾರ್ವಜನಿಕರು ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಸಹ ತನ್ನದೇ ಆದ ಪ್ರಯತ್ನ ಮಾಡುತ್ತಾ ಬಂದಿದೆ. ಪ್ರಧಾನಿ ಮೋದಿಯವರಲ್ಲಿ ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ಸಮಸ್ಯೆ ಪರಿಹರಿಸಲು ಕೋರಲಾಗಿದೆ. ಆದರೆ, ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ. ಇದೀಗ ಯಡಿಯೂರಪ್ಪನವರು ಈ ರೀತಿ ಹೇಳಿಕೆ ನೀಡುತ್ತಿರುವುದು ಚುನಾವಣೆಯ ದೃಷ್ಟಿಯಿಂದಲೇ ಹೊರತು ಸಮಸ್ಯೆ ಬಗೆಹರಿಸುವುದಕ್ಕಲ್ಲ ಎಂದು ಅವರು ತಿಳಿಸಿದರು.
ಇನ್ನು ಬಿಜೆಪಿ ಎಸ್‌ಸಿ ಘಟಕದ ರಾಜ್ಯಾಧ್ಯಕ್ಷ ವೀರಯ್ಯನವರು ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ರಾಜ್ಯ ಸರ್ಕಾರ ಎಂದಿಗೂ ಡಾ| ಬಿ.ಆರ್. ಅಂಬೇಡ್ಕರ್‌ರನ್ನು ನಿರ್ಲಕ್ಷ ಮಾಡಿಲ್ಲ. ವಾರ್ತಾ ಇಲಾಖೆ ಅಧಿಕಾರಿಗಳ ತಪ್ಪಿನಿಂದ ಸಂವಿಧಾನ ಸಮರ್ಪಣಾ ದಿನಾಚರಣೆಯಂದು ನೀಡಿದ ಜಾಹಿರಾತಿನಲ್ಲಿ ಅಂಬೇಡ್ಕರ್ ಫೋಟೊ ಇಲ್ಲವಾಗಿದೆ. ಇದನ್ನೇ ವೀರಯ್ಯ ದೊಡ್ಡದು ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ಜನಾಂಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಕೈಗೊಂಡಿರುವ ಯೋಜನೆ ಕುರಿತು, ನೀಡಿರುವ
ಅನುದಾನ ಕುರಿತು ಸಹ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ತಿರುಗೇಟು ನೀಡಿದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾನು ಮಾಯಕೊಂಡದಿಂದ ಸ್ಪರ್ಧೆ ಮಾಡುವ ಇಂಗಿತ ಹೊಂದಿದ್ದೇನೆ. ಮುಖ್ಯಮಂತ್ರಿ ಸಿದ್ದರಾಯಮ್ಮ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ನನಗೆ ಟಿಕೆಟ್ ಕೊಡಿಸಲು ಯತ್ನಿಸಿದರೆ ಅದು ಸಾಧ್ಯ ಇದೆ. ನಾನು 1980ರಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನಗರ ಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದೇನೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಕೆ.ಜಿ. ರಹಮತ್ ಉಲ್ಲಾ, ಎನ್.ಕೆ. ಲಿಯಾಕತ್ ಆಲಿ, ಅಯಾಜ್, ನೂರ್ ಅಹ್ಮದ್, ಡಿ. ಶಿವಕುಮಾರ್
ಸುದ್ದಿಗೋಷ್ಟಿಯಲ್ಲಿದ್ದರು.