Advertisement

ಉಲ್ಲಾಳದಲ್ಲಿ ಜುಬೈರ್‌ ಹತ್ಯೆ : ಖಾದರ್‌ ರಾಜೀನಾಮೆಗೆ ಬಿಜೆಪಿ ಆಗ್ರಹ

09:45 AM Oct 06, 2017 | Karthik A |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲದಲ್ಲಿ ಸಾರ್ವಜನಿಕರ ಎದುರೇ ಬಿಜೆಪಿ ಕಾರ್ಯಕರ್ತ ಮಹಮ್ಮದ್‌ ಜುಬೈರ್‌ನನ್ನು ಹತ್ಯೆ ಮಾಡಿದ ಪ್ರಕರಣದ ನೈತಿಕ ಹೊಣೆ ಹೊತ್ತು ಕ್ಷೇತ್ರದ ಶಾಸಕರೂ ಆಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್‌ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ಗೋ. ಮಧುಸೂಧನ್‌ ಮತ್ತು ಸಹ ವಕ್ತಾರ ಅನ್ವರ್‌ ಮಾಣಿಪ್ಪಾಡಿ, ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ರಾಷ್ಟ್ರವಾದಿ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಸರಣಿಯಲ್ಲಿ ಬುಧವಾರ ನಡೆದಿರುವ ಹತ್ಯೆ ಕಳೆದ ನಾಲ್ಕು ವರ್ಷಗಳಲ್ಲಿ 13ನೆಯದ್ದಾಗಿದೆ. ಜುಬೈರ್‌ ಹತ್ಯೆಯಲ್ಲಿ ಯುವ ಕಾಂಗ್ರೆಸ್‌ ಮುಖಂಡ ಹಾಗೂ ಸಚಿವ ಖಾದರ್‌ ಅವರ ಆಪ್ತ ಇಲಿಯಾಸ್‌ ಅವರ ಪಾತ್ರವಿದೆ ಎಂದು ಆರೋಪಿಸಿದ ಅವರು, ಈ ಹಿನ್ನೆಲೆಯಲ್ಲಿ ಖಾದರ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. 

Advertisement

ಬುಧವಾರ ದುಷ್ಕರ್ಮಿಗಳ ಗುಂಪೊಂದು ಜುಬೈರ್‌ ನನ್ನು ಅಟ್ಟಾಡಿಸಿ ಚಾಕುಗಳಿಂದ ಇರಿದು ಹತ್ಯೆ ಮಾಡಿದ್ದಾರೆ. ಸ್ಥಳೀಯ ಮಸೀದಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಈ ಹತ್ಯೆಯ ದೃಶ್ಯದಲ್ಲಿ ಕೇಳಿಬರುತ್ತಿರುವ ಧ್ವನಿಯಿಂದ ಇಲಿಯಾಸ್‌ ಪಾತ್ರ ಇರುವುದು ದೃಢಪಡುತ್ತದೆ ಎಂದು ಹೇಳಿದರು.

ಎನ್‌ಐಎ ತನಿಖೆಗೆ ಆಗ್ರಹ
ಹತ್ಯೆಯಲ್ಲಿ ಶಾಮೀಲಾಗಿರುವವರ ಅಕ್ರಮ ಚಟುವಟಿಕೆಗಳ ಬಗ್ಗೆ (ಡ್ರಗ್‌ ಮಾಫಿಯಾ) ಜುಬೈರ್‌ ಪೊಲೀಸರಿಗೆ ದೂರು ನೀಡಿದ್ದರು. ಈ ಕಾರಣದಿಂದ ಬಂಧನಕ್ಕೊಳಗಾಗಿ ಜೈಲುವಾಸ ಅನುಭವಿಸಿದವರೇ ಕೆಲವು ಸಮಾಜ ಬಾಹಿರ ಶಕ್ತಿಗಳೊಂದಿಗೆ ಕೈಜೋಡಿಸಿ ಈ ಕೃತ್ಯ ಎಸಗಿರುವ ಅನುಮಾನವಿದೆ. ಆದ್ದರಿಂದ ಈ ಪ್ರಕರಣದ ಕುರಿತು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೂಲಕ ತನಿಖೆ ನಡೆಸಬೇಕು. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೂ ಮನವಿ ಮಾಡಲಾಗುವುದು. ಸಮಾಜದ್ರೋಹಿ ಸಂಘಟನೆಗಳನ್ನು ಮಟ್ಟ ಹಾಕಲು ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾದಳದ ಕಚೇರಿ ತೆರೆಯುವಂತೆ ಕೋರಲಾಗುವುದು ಎಂದು ಗೋ. ಮಧುಸೂಧನ್‌ ಮತ್ತು ಅನ್ವರ್‌ ಮಾಣಿಪ್ಪಾಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next