Advertisement

12 ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿ ಒತ್ತಾಯ

11:48 AM Mar 29, 2019 | Team Udayavani |

ಬೆಂಗಳೂರು: ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕಾಗಿ ಚುನಾವಣಾ ಕರ್ತವ್ಯದಲ್ಲಿರುವ 12 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಗುರುವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ಮನವಿ ಮಾಡಿತು.

Advertisement

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾಧಿಕಾರಿಗಳಾದ ವಿಜಯಶಂಕರ್‌ ಹಾಗೂ ಕರಿಗೌಡ ಸೇರಿದಂತೆ 12 ಜನ ಅಧಿಕಾರಿಗಳ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿದ

-ಬಿಜೆಪಿ ರಾಜ್ಯ ಘಟಕದ ವಕ್ತಾರ ಎಸ್‌. ಸುರೇಶ್‌ ಕುಮಾರ್‌ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, “ಈ ಅಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ಅಸಾಧ್ಯ. ಹಾಗಾಗಿ, ಅವರೆಲ್ಲರನ್ನೂ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಸರ್ಕಾರದ ಏಜೆಂಟರು: ಅದರಲ್ಲೂ ಬೆಂಗಳೂರು ವ್ಯಾಪ್ತಿಯಲ್ಲಿ ಮೂವರು ಅಧಿಕಾರಿಗಳು ಮೈತ್ರಿ ಸರ್ಕಾರದ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ರನ್ನು 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಅವರು ಆರಂಭದಿಂದಲೂ ಬಿಜೆಪಿ ವಿರುದ್ಧವಾಗೇ ಇದ್ದಾರೆ.

ಹಾಗಾಗಿ, ಅವರಿಂದ ನಿಷ್ಪಕ್ಷಪಾತ ನಿರೀಕ್ಷೆ ಅಸಾಧ್ಯ. ಅದೇ ರೀತಿ, ಜಿಲ್ಲಾಧಿಕಾರಿಗಳಾದ ವಿಜಯ ಶಂಕರ್‌ ಮತ್ತು ಕರಿಗೌಡ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೆ ನಿಕಟ ಸಂಬಂಧ ಹೊಂದಿದ್ದಾರೆ. ಚುನಾವಣೆ ಘೋಷಣೆಗೆ ಕೆಲವೇ ತಿಂಗಳು ಮೊದಲು ಜಿಲ್ಲಾಧಿಕಾರಿಗಳಾಗಿ ವರ್ಗಾವಣೆ ಆಗಿದ್ದಾರೆ. ಆದ್ದರಿಂದ ಮುಕ್ತ ಮತದಾನದ ಉದ್ದೇಶದಿಂದ ಈ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಹೇಳಿದರು.

Advertisement

ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌ ಕುಮಾರ್‌, “ಬೇರೆ ಬೇರೆ ಕಾರಣಗಳಿಂದ ಮುಕ್ತ ಮತದಾನಕ್ಕೆ ಅಡ್ಡಿ ಆಗಬಹುದಾದ 12 ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದೇವೆ. ಮುಖ್ಯ ಚುನಾವಣಾಧಿಕಾರಿಗಳು ಇದನ್ನು ಸಂಪೂರ್ಣವಾಗಿ ಪರಿಶೀಲಿಸಿ, ಯಾವುದೇ ಕಾರಣಕ್ಕೂ ಅಡ್ಡಿಪಡಿಸಲು ಅವಕಾಶ ಕೊಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ’ ಎಂದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್‌ರಾಜ್‌ ಅವರ ಜಾಹೀರಾತುಗಳು ಈಗಲೂ ಬಿಎಂಟಿಸಿ ಬಸ್‌ಗಳು ಮತ್ತು ಕೆಲವು ಸುದ್ದಿ ವಾಹಿನಿಗಳಲ್ಲಿ ಬರುತ್ತಿವೆ. ಇದರ ಬಗ್ಗೆಯೂ ಚುನಾವಣಾಧಿಕಾರಿಗಳ ಗಮನಸೆಳೆಯಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳು ಯಾರ್ಯಾರು?: ಎನ್‌. ಮಂಜುನಾಥ ಪ್ರಸಾದ್‌ (ಬಿಬಿಎಂಪಿ ಆಯುಕ್ತ), ಕರಿಗೌಡ (ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ), ವಿಜಯಶಂಕರ್‌ (ಬೆಂಗಳೂರು ನಗರ ಜಿಲ್ಲಾಧಿಕಾರಿ), ಆಲಂ ಪಾಷ (ಹಾಸನ ಜಿಲ್ಲಾಧಿಕಾರಿ), ಪ್ರಕಾಶ್‌ ಗೌಡ (ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ), ಡಿ.ಶಿವಪ್ರಕಾಶ್‌ (ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ), ಮಂಡ್ಯ, ಹಾಸನ ಮತ್ತು ರಾಮನಗರದ ಅಬಕಾರಿ ಜಿಲ್ಲಾಧಿಕಾರಿಗಳು, ಎಚ್‌.ಸಿ. ಮಹದೇವ್‌ (ಬೀದರ್‌ ಜಿಲ್ಲಾಧಿಕಾರಿ), ವೆಂಕಟೇಶ್‌ ಕುಮಾರ್‌ (ಕಲಬುರಗಿ ಜಿಲ್ಲಾಧಿಕಾರಿ), ಲಾಡಾ ಮಾರ್ಟಿನ್‌ ಮರ್ಬಂಜಂಗ್‌ (ಕಲಬುರಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ), ಟಿ.ಯೋಗೇಶ್‌ (ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿ) ಮತ್ತು ಬಲಭೀಮ ಕಾಂಬ್ಳೆ.

Advertisement

Udayavani is now on Telegram. Click here to join our channel and stay updated with the latest news.

Next