ಶಹಾಪುರ: ಸ್ಥಳೀಯ ನಗರಸಭೆಯಲ್ಲಿ ಕೇಂದ್ರ ಸರ್ಕಾರದ ಸ್ವತ್ಛ ಭಾರತ ಅಭಿಯಾನ ಯೋಜನೆಯಡಿ ಅನುದಾನ ಬೇಕಾ ಬಿಟ್ಟಿಯಾಗಿ ಬಳಸುತ್ತಿದ್ದು, ಕಾಮಗಾರಿ ನಿರ್ವಹಿಸದೆ ಹಣ ಕಬಳಿಸುತ್ತಿದ್ದಾರೆ. ಆದ್ದರಿಂದ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ತಾಲೂಕು ಬಿಜೆಪಿ ರೈತ ಮೋರ್ಚಾ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ಶರಣಪ್ಪ ಮಡಿವಾಳ ಮಾತನಾಡಿ, ಭಾರತ ಸರ್ಕಾರದಿಂದ ನಡೆಯುತ್ತಿದ್ದ ಸ್ವತ್ಛ ಭಾರತ ಮಷಿನ್ ಯೋಜನೆಯಡಿ ಜಾರಿಗೊಳಿಸಲಾದ ಪ್ರತಿ ಮನೆಗೆ ಶೌಚಾಲಯ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು, ಕಾಮಗಾರಿ ಹೆಸರಲ್ಲಿ ನಗರಸಭೆ ಸಿಬ್ಬಂದಿ ಅವ್ಯವಹಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಮಾತನಾಡಿ, ಇಲ್ಲಿನ ನಗರಸಭೆ ಸಿಬ್ಬಂದಿ ಕಳಪೆ ಮಟ್ಟದ ಶೌಚಾಲಯ ನಿರ್ಮಿಸುವ ಮೂಲಕ ನಿರ್ಮಾಣದ ಹಂತದಲ್ಲಿ ಹಣ ಪಡೆದು ಕಾಮಗಾರಿ ಅಪೂರ್ಣದಲ್ಲಿಯೇ ಬಿಲ್ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ವಿವಿಧಡೆ ಶೌಚಾಲಯ ನಿರ್ಮಾಣವಾಗದೆ ಬಿಲ್ ತಗೆಯಲಾಗಿದೆ. ಹೀಗಾಗಿ ಇಲ್ಲಿ ಸಿಬ್ಬಂದಿ ಮತ್ತು ಸಾರ್ವಜನಿಕರ ಮಧ್ಯ ಅಕ್ರಮ ಒಪ್ಪಂದ ನಡೆದಿದೆ. ಉತ್ತಮ ಯೋಜನೆ ಹಳ್ಳ ಹಿಡಿಯಲು ಅಧಿಕಾರಿಗಳೇ ಕಾರಣ ಎಂದು ದೂರಿದರು.
ಕಾರಣ ಜಿಲ್ಲಾಧಿಕಾರಿಗಳು ಕೂಡಲೇ ಸೂಕ್ತ ತನಿಖೆ ಕೈಗೊಂಡು ಕಾಮಗಾರಿ ನಿರ್ವಹಿಸದೆ ಬಿಲ್ ಮಾಡಿರುವುದು ಸೇರಿದಂತೆ, ಕಳಪೆ ಕಾಮಗಾರಿ ಕೈಗೊಂಡಿರುವುದನ್ನು ಪತ್ತೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಈ ಕುರಿತು ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ಒದಗಿಸಲಾಗುವುದು. ಜಿಲ್ಲಾಧಿಕಾರಿಗಳ ಅನತಿಯಂತೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎಸ್ಟಿ ಮೋರ್ಚಾ ಅಧ್ಯಕ್ಷ ತ್ರೀಶೂಲ ಹವಲ್ದಾರ, ಶಿವಶರಣರಡ್ಡಿ ಸಲಾದಪುರ, ಚಂದ್ರಶೇಖರ ಬಿ. ಇದ್ದರು.