ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಹಾಗೂ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹೆಚ್ಚಿಸಿದ್ದು, ಕಾಂಗ್ರೆಸ್ ಇಕ್ಕಟ್ಟಿನಲ್ಲಿ ಸಿಲುಕಿದೆ.
ಬಿಜೆಪಿ ನಾಯಕರು ಪ್ರತಿ ಜಿಲ್ಲೆ ಯಲ್ಲೂ ಈ ಬಗ್ಗೆ ಹೋರಾಟ ಆರಂಭಿಸಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಅವರು ಶಿವಮೊಗಕ್ಕೆ ತೆರಳಿ ಮೃತ ಪಿ.ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾ ರಾಜ್ಯಾದ್ಯಂತ ಶನಿವಾರ ರಸ್ತೆ ತಡೆಗೆ ಕರೆ ನೀಡಿದೆ.ಇದೆಲ್ಲದರ ಮಧ್ಯೆ ಬಿಜೆಪಿ ಸಾಮಾ ಜಿಕ ಜಾಲತಾಣ ಪ್ರಕೋಷ್ಠದಿಂದ ನಾಗೇಂದ್ರ ರಾಜೀನಾಮೆ ಯಾವಾಗ ಎಂಬ ಅಭಿಯಾನವನ್ನು ನಿರಂತರ ವಾಗಿ ನಡೆಸಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಡಾ| ಸಿ.ಎನ್.ಅಶ್ವತ್ಥನಾರಾಯಣ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋ. ರೂ. ಅವ್ಯವಹಾರ ಹಗರಣಕ್ಕೆ ಸಂಬಂಧ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ ಪಡೆದು ಬಂಧಿಸಬೇಕು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನ ಸಿಬಿಐ ಕಚೇರಿಗೆ ದೂರು ಕೊಟ್ಟಿದೆ. ಅದರನ್ವಯ ಸಿಬಿಐ ತನಿಖೆ ನಡೆಯಲಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಗರಣಕ್ಕೆ ರಾಜ್ಯ ಸರಕಾರವೇ ನೇರ ಹೊಣೆ. ನಕಲಿ ಖಾತೆ ತೆರೆದು, ಕ್ರಿಯಾ ಯೋಜನೆ ಇಲ್ಲದೆ ಹಣ ವರ್ಗಾವಣೆ ಮಾಡಿದ್ದಾರೆ. ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬರೇ ಡೆತ್‌ನೋಟ್‌ಗಳೇ ಹೊರಗೆ ಬರುತ್ತಿವೆ ಎಂದರು.
ಎಫ್ಐಆರ್‌ನಲ್ಲಿ ಸಚಿವರ ಮೇಲೆ ಪ್ರಕರಣ ದಾಖಲಿಸಿಲ್ಲ. ಅಧಿಕಾರಿ ಮೇಲೆ ಕೇಸಿಲ್ಲ. ಬರೀ ಬ್ಯಾಂಕ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ. ಸರಕಾರ ಖಜಾನೆ ಕಾಪಾಡುವ ಬದಲು ನೇರವಾಗಿ ಖಜಾನೆಗೆ ಕೈ ಹಾಕಿದೆ. ಅಧಿಕಾರ ದಾಹ, ಭ್ರಷ್ಟಾಚಾರದಲ್ಲಿ ತೊಡಗಿ, ಪ್ರತಿನಿತ್ಯ ಅವರನ್ನು ಬಯಲಿಗೆ ಎಳೆಯುವಂತಾಗಿದೆ ಎಂದರು.
ಘಟನೆ ನಡೆದು 4 ದಿನಗಳಾದರೂ ಸಿಎಂಗೆ ಪ್ರಕರಣದ ವಿವರ ತಿಳಿದಿಲ್ಲ ಎಂದರೆ ಏನರ್ಥ? ಈ ಸರಕಾರದ ಗೃಹ ಸಚಿವರಿಗೆ ಕೈ ಮುಗಿಯಬೇಕು, ಉಪಮುಖ್ಯಮಂತ್ರಿಗೆ ಅಡ್ಡ ಬೀಳಬೇಕು. ರಾಜ್ಯದಲ್ಲಿ ಸರಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ.