ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಅವ್ಯವಹಾರ ಹಾಗೂ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣಗಳಿಂದಾಗಿ ಈಗ ರಾಜ್ಯದಲ್ಲಿ ಇರುವುದು “ಸ್ಕ್ಯಾಮ್ ಸಿದ್ದರಾಮಯ್ಯ’ ಎಂಬಂತಾಗಿದೆ, ಹಾಗಾಗಿ ಅವರು ಕೋಟ್ಯಂತರ ರೂ. ಹಗರಣಗಳ ಹೊಣೆ ಹೊತ್ತು ರಾಜೀನಾಮೆ ನೀಡಲೇಬೇಕು ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ಮುಖ್ಯಸಚೇತಕ ಎನ್.ರವಿಕುಮಾರ್ ಆಗ್ರಹಿಸಿದರು.
ಇಲ್ಲಿನ ಸಂಘನಿಕೇತನದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧ್ಯವಿದ್ದರೆ ಸಿಎಂ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸವಾಲೆಸೆದರು.
ಮುಡಾದಲ್ಲಿ ಭ್ರಷ್ಟಾಚಾರ ಆಗಿರು ವುದು ಬಹಿರಂಗಗೊಂಡಿದೆ. 6,800 ನಿವೇಶನ ವಿತರಣೆ ಮಾಡಲಾಗಿದೆ. ಸಿದ್ದರಾಮಯ್ಯನವವರ ಪತ್ನಿಗೆ 14 ಸೈಟ್ ನೀಡಿದ್ದು, ಅದರ ಬೆಲೆ ಇಂದು 35 ಕೋಟಿ ರೂ. ಆಗಿದೆ. ಸಿಎಂ ಪತ್ನಿಯ 3 ಎಕ್ರೆ 17 ಗುಂಟೆ ಜಮೀನು ಸ್ವಾಧೀನ ಮಾಡುವಾಗ ಅದರ ದರ ಹೆಚ್ಚೆಂದರೆ 1 ಕೋಟಿ ರೂ. ಇದ್ದಿರಬಹುದು. ಅದಕ್ಕೆ ಬದಲಾಗಿ ವಿಜಯನಗರದ ಪ್ರತಿಷ್ಠಿತ ಪ್ರದೇಶದಲ್ಲಿ ನಿವೇಶನ ಪಡೆದಿದ್ದಾರೆ. ಇಷ್ಟಾದರೂ ಸಿಎಂ ಸಿದ್ದರಾಮಯ್ಯ ತಮ್ಮದೇ ಭಂಡತನದಲ್ಲಿ ಬೇಕಾದರೆ ಸೈಟ್ ವಾಪಸ್ ಮಾಡುತ್ತೇನೆ, 62 ಕೋಟಿ ರೂ. ಕೊಡಿ. ಇದರಲ್ಲೇನೂ ಅವ್ಯವಹಾರ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಸಿಬಿಐ ತನಿಖೆ ನಡೆಸಲಿ ಎಂದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಬುಡಕಟ್ಟಿನ ಜನರ ಅಭಿವೃದ್ಧಿಗೆ ಇರಿಸಲಾಗಿತ್ತು, ಕಾಂಗ್ರೆಸ್ ಬಳಿ ಚುನಾವಣೆಗೆ ಹಣ ಇರಲಿಲ್ಲ. ಹಾಗಾಗಿಯೇ ನಿಗಮದಿಂದ 94 ಕೋಟಿ ರೂ. ಮೊತ್ತವನ್ನು ಯಾವ್ಯಾವುದೋ 700 ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ಸಚಿವ ನಾಗೇಂದ್ರ ಅವ ರಿಂದ ರಾಜೀನಾಮೆ ಪಡೆದ ಸಿಎಂ, ಈಗ ಮುಡಾ ಹಗರಣದಲ್ಲಿ ಸ್ವತಃ ರಾಜೀ ನಾಮೆ ಕೊಡಲೇಬೇಕು ಎಂದರು.
ಭಂಡ ಸಿಎಂ ಸಿದ್ದರಾಮಯ್ಯ ಮೊಂಡುವಾದ ಮಾಡುತ್ತಾರೆ. ಪಂಚಗ್ಯಾರಂಟಿ ಯೋಜನೆಗಳೂ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಬಸ್ ಸಂಖ್ಯೆಯನ್ನು ಶೇ.50 ಕಡಿಮೆ ಮಾಡಿದ್ದು, ಇದರಿಂದ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ. ಇನ್ನೊಂದೆಡೆ ಸರಕಾರ ರಾಜ್ಯದಲ್ಲಿ ಲೂಟಿ ಮಾಡುತ್ತಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಾಗಿದೆ, ಭೂಮಿ ನೋಂದಣಿ ಶುಲ್ಕ ಹೆಚ್ಚಾಗಿದೆ. ಮೊನ್ನೆಯಷ್ಟೇ ಹಾಲಿನ ದರ ಏರಿಸಿದ್ದು, ಅದನ್ನು ಹೈನುಗಾರರಿಗೆ ಕೊಡುವ ಬದಲು ಖಜಾನೆ ತುಂಬಲು ಬಳಸುತ್ತಿದ್ದಾರೆ. ಹಾಗಾಗಿ ಜಿಲ್ಲಾ ಪಂಚಾ ಯತ್ ತಾಲೂಕು ಪಂಚಾಯತ್ ಚುನಾ ವಣೆಯಲ್ಲಿ ಕಾಂಗ್ರೆಸ್‌ಗೆ ಸರಿಯಾದ ಪಾಠ ಕಲಿಸಬೇಕು ಎಂದರು.
ರಾಜ್ಯ ಬಿಜೆಪಿಗೆ ಶಕ್ತಿ ಕೊಟ್ಟ ಪ್ರದೇಶವಿದು, ಇಲ್ಲಿನ ಕಾರ್ಯ ಕರ್ತರಂತೆಯೇ ರಾಜ್ಯದ ಇತರ ಕಡೆಯ ಬಿಜೆಪಿ ಕಾರ್ಯಕರ್ತರೂ ಇದ್ದರೆ ಮತ್ತೆ ಸಿದ್ದರಾಮಯ್ಯ ತಲೆ ಎತ್ತಲಾರರು ಎಂದೂ ಹೇಳಿದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದರು. ಶಾಸಕಾರದ ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಹಪ್ರಭಾರಿ ರಾಜೇಶ್ ಕಾವೇರಿ, ಶಾಸಕ ವೇದವ್ಯಾಸ ಕಾಮತ್, ರಾಜೇಶ್ ನಾೖಕ್ ಉಳಿಪಾಡಿಗುತ್ತು, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ ಉಪಸ್ಥಿತರಿದ್ದರು.
ಪ್ರೇಮಾನಂದ ಶೆಟ್ಟಿ ಪ್ರಸ್ತಾವಿಸಿದರು. ಉಪಾಧ್ಯಕ್ಷ ಸುನಿಲ್ ಆಳ್ವ ಸ್ವಾಗತಿಸಿದರು, ತಿಲಕ್‌ರಾಜ್ ಕೃಷ್ಣಾಪುರ ಹಾಗೂ ಯತೀಶ್ ಅರ್ವಾರ್ ನಿರೂಪಿಸಿದರು.