Advertisement

Lok Sabha polls; ನಾಳೆಯ ಬಳಿಕ ದಿಲ್ಲಿಗೆ ಬಿಜೆಪಿ ನಿಯೋಗ

11:38 PM Mar 04, 2024 | Team Udayavani |

ಬೆಂಗಳೂರು: ಲೋಕಸಭಾ ಆಕಾಂಕ್ಷಿಗಳ ಪಟ್ಟಿಯನ್ನು ಎರಡು ದಿನಗಳ ಬಳಿಕ ವರಿಷ್ಠರ ಮುಂದಿಡಲು ರಾಜ್ಯ ಬಿಜೆಪಿ ತಯಾರಿ ನಡೆಸಿದ್ದು, ರವಿವಾರವಷ್ಟೇ ವೀಕ್ಷಕರು ಸಲ್ಲಿಸಿರುವ ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಚುನಾವಣ ಸಮಿತಿ ಸ್ವೀಕರಿಸಿದೆ. ಅದೇ ಪಟ್ಟಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬುಧವಾರ ದಿಲ್ಲಿಗೆ ತೆರಳಲಿದ್ದಾರೆ.

Advertisement

ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯ ಪ್ರವಾಸದಲ್ಲಿದ್ದು, ಸೋಮವಾರ ಹಾಗೂ ಮಂಗಳವಾರ ಬೆಳಗಾವಿಯಲ್ಲಿ ಸರಣಿ ಸಭೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಜತೆಯಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಪ್ರವಾಸದಲ್ಲಿ ಭಾಗಿಯಾಗಿದ್ದು, ನಡ್ಡಾ ದಿಲ್ಲಿ ತಲುಪಿದ ಬಳಿಕ ಬೆಂಗಳೂರಿನಿಂದ ತೆರಳಲು ನಿರ್ಧರಿಸಿದ್ದಾರೆ.

ಈಗಾಗಲೇ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲೂ 2-3 ದಿನ ಪ್ರವಾಸ ನಡೆಸಿರುವ ವೀಕ್ಷಕರು ಆಕಾಂಕ್ಷಿಗಳ ಪಟ್ಟಿಯನ್ನು ರಾಜ್ಯ ಸಮಿತಿಗೆ ರವಾನಿಸಿದ್ದಾರೆ. ಪ್ರಮುಖವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಕ್ಷಕ್ಕೆ ಅಧಿಕೃತವಾಗಿ ತಿಳಿಸಿರುವ ಹಾಲಿ ಸಂಸದರನ್ನು ಹೊರತುಪಡಿಸಿ, ಉಳಿದೆಲ್ಲ ಕ್ಷೇತ್ರಗಳಲ್ಲೂ ಹಾಲಿ ಸಂಸದರ ಹೆಸರನ್ನು ಪಟ್ಟಿಯಲ್ಲಿ ಹಾಗೇ ಬಿಡಲಾಗಿದೆ.

ಪಟ್ಟಿಯಲ್ಲಿ ಕನಿಷ್ಠ 3, ಗರಿಷ್ಠ 5 ಹೆಸರು
ಆಯಾ ಕ್ಷೇತ್ರದಲ್ಲಿ ಪಕ್ಷದ ಸೂಚನೆಯಂತೆ ಕೆಲಸ ಆರಂಭಿಸಿರುವ ಆಕಾಂಕ್ಷಿಗಳ ಪೈಕಿ ಹಾಲಿ ಸಂಸದ ಹಾಗೂ ಕೇಂದ್ರ ಸಚಿವರಾಗಿ ಯಶಸ್ವಿಯಾಗಿರುವವರು, ಗೆಲ್ಲಬಲ್ಲ ಅಭ್ಯರ್ಥಿಗಳು, ವಿರೋಧಿಗಳ ಎದುರು ಪ್ರಬಲ ಹೋರಾಟ ನೀಡಬಲ್ಲವರು ಸಹಿತ ಕನಿಷ್ಠ 3ರಿಂದ ಗರಿಷ್ಠ 5 ಹೆಸರುಗಳು ಪಟ್ಟಿಯಲ್ಲಿವೆ. ಇದೇ ಪಟ್ಟಿಯನ್ನು ವರಿಷ್ಠರಿಗೆ ತಲುಪಿಸುವ ಸಲುವಾಗಿ ಬುಧವಾರದ ಬಳಿಕ ವಿಜಯೇಂದ್ರ ದಿಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅವರೊಂದಿಗೆ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಜಿ.ವಿ. ಹಾಗೂ ನಿಕಟಪೂರ್ವ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಕೂಡ ತೆರಳುವ ಸಾಧ್ಯತೆ ಇದೆ.

ಬಿಜೆಪಿ ಮಹಿಳಾ ಮೋರ್ಚಾ: ರಾಜ್ಯದಲ್ಲಿ ನಾರಿಶಕ್ತಿ ಯಾತ್ರೆ
ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದಿಂದ ನಾಡಿನಾದ್ಯಂತ ನಾರಿಶಕ್ತಿ ಯಾತ್ರೆಗೆ ಚಾಲನೆ ನೀಡಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸ್ಕೂಟಿ, ಬೈಕ್‌, ಸೈಕಲ್‌ ಯಾತ್ರೆಗಳು ನಡೆಯಲಿವೆ ಎಂದು ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ತಿಳಿಸಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.4ರಿಂದ 6ರ ವರೆಗೆ ಮೂರು ದಿನಗಳ ಕಾಲ ನಾರಿಶಕ್ತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ರನ್‌ ಫಾರ್‌ ನೇಷನ್‌, ರನ್‌ ಫಾರ್‌ ಮೋದಿ ಕಾರ್ಯಕ್ರಮಗಳು ನಡೆದಿದ್ದು, ಶಿವಮೊಗ್ಗ, ಧಾರವಾಡ ಗ್ರಾಮಾಂತರ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆದಿವೆ.

ದೇಶದಲ್ಲೇ ಗರಿಷ್ಠ ಮಹಿಳಾ ದೌರ್ಜನ್ಯ ನಡೆದಿರುವ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಾ.6ರಂದು ಸಮಾವೇಶ ಆಯೋಜಿಸಿದ್ದು, 1 ಲಕ್ಷ ಮಹಿಳೆಯರು ಸಮಾವೇಶಗೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು ಪ್ರಧಾನಿ ಭಾಷಣದ ನೇರ ಪ್ರಸಾರ ವೀಕ್ಷಣೆಗೆ ಎಲ್ಲೆಡೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next