Advertisement

ಸಿಎಂ ಬಳಸಿದ ಪದ ವಿರುದ್ಧ ರಾಜ್ಯಪಾಲರಿಗೆ ದೂರು 

06:00 AM Sep 22, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ “ದಂಗೆ’ ಹೇಳಿಕೆ ರಾಜಕೀಯವಾಗಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಡೀ ಪ್ರಕರಣವನ್ನು ಜೀವಂತವಾಗಿಡಲು ತೀರ್ಮಾನಿಸಿರುವ ಬಿಜೆಪಿ, ರಾಜಕೀಯ ಅಸ್ತ್ರವಾಗಿಯೂ ಬಳಸಲು ಮುಂದಾಗಿದೆ.

Advertisement

“ಬಿಜೆಪಿ ವಿರುದ್ಧ ದಂಗೆ ಏಳಲು ರಾಜ್ಯದ ಜನತೆಗೆ ಕರೆ ನೀಡಬೇಕಾಗುತ್ತದೆ’ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ರಾಜ್ಯ ಬಿಜೆಪಿ ಶುಕ್ರವಾರ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ರಾಜ್ಯಪಾಲ ವಜೂಭಾಯ್‌ ವಾಲಾ ಅವರನ್ನು ಭೇಟಿಯಾಗಿ, ಮುಖ್ಯಮಂತ್ರಿಯವರ ವಿರುದ್ಧ ಸಂವಿಧಾನ ಬದ್ಧವಾಗಿ ಕ್ರಮ ಕೈಗೊಳ್ಳುವಂತೆ ಕೋರಿದೆ. ಇದಕ್ಕೂ ಮೊದಲು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎಸ್‌.ರಾಜು ಅವರನ್ನು ಭೇಟಿ ಮಾಡಿ, “ರಾಜದ್ರೋಹದ ಪ್ರಕರಣ ದಾಖಲು ಮಾಡಿಕೊಳ್ಳುವಂತೆ’ ದೂರಲಾಗಿದೆ.

ಪ್ರಮಾಣ ವಚನಕ್ಕೆ ವಿರುದ್ಧವಾಗಿ ಸ್ವತಃ ಮುಖ್ಯಮಂತ್ರಿಯವರೇ ದಂಗೆ ಏಳಿ ಎಂದು ಪ್ರಚೋದನೆಗೆ ಕರೆ ನೀಡಿರುವುದು ಗಂಭೀರ ಅಪರಾಧ. ಇದರ ವಿರುದ್ಧ ಐಪಿಸಿ ಸೆಕ್ಷನ್‌ 121, 121ಎ, 122, 123, 124ಎ, ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಅರ್ಹತೆ ಕಳೆದುಕೊಂಡಿದ್ದಾರೆ:
ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ.ಸದಾನಂದಗೌಡ ಅವರು, “”ಸಿಎಂ ಕುಮಾರಸ್ವಾಮಿ ಪ್ರಚೋದನೆಯ ಹೇಳಿಕೆ ನೀಡುವ ಮೂಲಕ ಆ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಂಡಿದ್ದಾರೆ. ಹಾಗಾಗಿ ರಾಜ್ಯಪಾಲರು ಸಂವಿಧಾನ ಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ. ಆ ಬಗ್ಗೆ ನಮಗೆ ವಿಶ್ವಾಸವಿದೆ” ಎಂದು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ನಿಯೋಗದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಹರತಾಳು ಹಾಲಪ್ಪ, ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಇದ್ದರು. ಸದಾನಂದಗೌಡರ ನಿಯೋಗದಲ್ಲಿ ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ್‌ ಸೇರಿ ಇನ್ನಷ್ಟು ನಾಯಕರಿದ್ದರು.

Advertisement

ದಂಗೆ ಹೇಳಿಕೆ ಜೀವಂತ
ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ಶುಕ್ರವಾರ ಕಾರ್ಯತಂತ್ರಗಳ ಬಗ್ಗೆ ಬಿರು ಸಿನ ಚರ್ಚೆ ನಡೆಯಿತು. ದಂಗೆ ಹೇಳಿಕೆ ಜೀವಂತ ಇಡುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಸಹ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್‌ ಯತ್ನಾಳ್‌, ಸಿ.ಎಂ. ಉದಾಸಿ, ಗೋವಿಂದ ಕಾರಜೋಳ, ರೇಣುಕಾಚಾರ್ಯ, ಹರತಾಳು ಹಾಲಪ್ಪ, ಕುಮಾರ್‌ ಬಂಗಾರಪ್ಪ, ಎಸ್‌.ಆರ್‌. ವಿಶ್ವನಾಥ್‌, ಮಾಡಾಳ್‌ ವಿರೂಪಾಕ್ಷಪ್ಪ ಅವರ ಜತೆ ಸಮಾಲೋಚನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next