Advertisement
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಶಾ ಅವರಿಂದ ಒಮ್ಮೆ ಬಿಸಿ ಮುಟ್ಟಿಸಿಕೊಂಡಿದ್ದ ಬಿಜೆಪಿಯ ರಾಜ್ಯ ನಾಯಕರಿಗೆ ಶನಿವಾರ ಕೋರ್ ಕಮಿಟಿ ಸಭೆಯಲ್ಲಿ ಮತ್ತೂಂದು ಸುತ್ತಿನ ಚುರುಕು ಮುಟ್ಟಿದೆ. ಹೀಗಾಗಿ ರವಿವಾರದಿಂದಲೇ ಪಕ್ಷದ ಜಿಲ್ಲಾ ಮಟ್ಟದ ಪ್ರಮುಖರೊಂದಿಗೆ ಮಾತುಕತೆ ಆರಂಭಿಸಿದ್ದು, ಮೊದಲ ದಿನ ತಡರಾತ್ರಿಯವರೆಗೂ ಸಭೆಗಳು ಮುಂದುವರಿದಿದ್ದವು. ರವಿವಾರ ಚಿಕ್ಕಮಗಳೂರು, ಶಿವಮೊಗ್ಗ, ಉ. ಕನ್ನಡ, ದ. ಕನ್ನಡ, ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧ್ಯಕ್ಷರು, ಪಕ್ಷದ ಶಾಸಕರು ಹಾಗೂ ಪ್ರಮುಖರ ಸಭೆ ನಡೆಯಿತು.
Related Articles
Advertisement
ಜಿಲ್ಲಾ ಸಭೆಗಳಲ್ಲಿ ಕೋರ್ ಕಮಿಟಿ ಸದಸ್ಯರೊಬ್ಬರ ಹಾಜರಿ ಕಡ್ಡಾಯ: ಪ್ರತಿ ಮೂರು ಜಿಲ್ಲೆಗೊಬ್ಬ ಕೋರ್ ಕಮಿಟಿ ಸದಸ್ಯರನ್ನು ಉಸ್ತುವಾರಿಯಾಗಿ ನೇಮಕ ಮಾಡುವಂತೆ ಅಮಿತ್ ಶಾ ಶನಿವಾರ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗಳಲ್ಲಿ ನಡೆಯುವ ಪದಾಧಿಕಾರಿಗಳ ಸಭೆ, ಪ್ರಮುಖರ ಸಭೆ ಸಹಿತ ಚುನಾವಣಾ ಸಿದ್ಧತೆ ಮತ್ತು ಪಕ್ಷ ಸಂಘಟನೆ ಕುರಿತ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರೊಬ್ಬರು ಇರುವುದು ಕಡ್ಡಾಯ ಎಂದು ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲಾ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಕೆಲವೊಮ್ಮೆ ಭಿನ್ನಮತ ಉಂಟಾಗಿ ಅದು ವಾಗ್ವಾದ, ಗೊಂದಲಕ್ಕೂ ಕಾರಣವಾಗುತ್ತದೆ. ಮುಂದೆ ಈ ರೀತಿ ನಡೆಯಬಾರದು. ಯಾವುದೇ ಕಾರಣಕ್ಕೂ ಪಕ್ಷದಲ್ಲಿ ಸ್ಥಳೀಯ ವಾಗಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದ್ದು, ಕೋರ್ ಕಮಿಟಿ ಸದಸ್ಯರೇ ಇದರ ಜವಾಬ್ದಾರಿ ನೋಡಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪಾಲ್ಗೊಂಡ ಸಂತೋಷ್ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗಿನ ವಿರಸದ ಕಾರಣದಿಂದ ಬಿಜೆಪಿಯ ರಾಜ್ಯದ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ಇದೀಗ ಮತ್ತೆ ರಾಜ್ಯದಲ್ಲಿ ಚುರುಕಾಗಿದ್ದಾರೆ. ರವಿವಾರ ಆರಂಭವಾದ ಜಿಲ್ಲಾ ಪ್ರಮುಖರೊಂದಿಗಿನ ಕೋರ್ ಕಮಿಟಿ ಸದಸ್ಯರ ಸಭೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ಸಂತೋಷ್ ಅವರಿಗೆ ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆ ಉಸ್ತುವಾರಿ ವಹಿಸಲಾಗಿತ್ತಾದರೂ ಅವರು ರಾಜ್ಯದ ಬಗ್ಗೆ ಗಮನಹರಿಸಿರಲಿಲ್ಲ. ಯಾವತ್ತೂ ಪಕ್ಷದ ರಾಜ್ಯ ಕಾರ್ಯಕಾರಿಣಿಗೆ ತಪ್ಪಿಸಿಕೊಂಡವರಲ್ಲ. ಆದರೆ, ಕಳೆದ ಎಪ್ರಿಲ್‌ನಲ್ಲಿ ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿ ವೇಳೆ ಯಡಿಯೂರಪ್ಪ ಅವರು ಪಕ್ಷದ ಅಸಮಾಧಾನಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ನೇರ ಆರೋಪ ಮಾಡಿದ್ದು ಮತ್ತು ಕಾರ್ಯಕಾರಿಣಿಯಲ್ಲೂ ಅದು ಪ್ರತಿಧ್ವನಿಸಿತ್ತು. ಇದರಿಂದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿಯಿಂದ ಅವರು ದೂರವೇ ಉಳಿದಿದ್ದರು. ಆದರೆ, ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ ತೀವ್ರಗೊಳಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಕರ್ನಾಟಕದ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಸಂತೋಷ್ ಅವರಿಗೆ ಸೂಚಿಸಿದ್ದರು. ಜತೆಗೆ ಅವರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ತಾಕೀತು ಮಾಡಿದ್ದರು. ಇದರ ಬೆನ್ನಲ್ಲೇ ಸಂತೋಷ್ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಜವಾಬ್ದಾರಿ ನೀಡಿ, ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಯಾತ್ರೆಯ ಉಸ್ತುವಾರಿ ವಹಿಸಲಾಗಿತ್ತು. ಇದೀಗ ಜಿಲ್ಲಾ ಪ್ರಮುಖರ ಸಭೆಯಲ್ಲೂ ಪಾಲ್ಗೊಳ್ಳುವ ಮೂಲಕ ರಾಜ್ಯದಲ್ಲೂ ತಮ್ಮ ಕೆಲಸ ಚುರುಕುಗೊಳಿಸಿದ್ದಾರೆ.