ಹುಬ್ಬಳ್ಳಿ: ಪಕ್ಷ ಸಂಘಟನೆ, ನ. 13ರಂದು ನಗರಲ್ಲಿ ನಡೆಸಲು ಉದ್ದೇಶಿಸಿರುವ ಪಕ್ಷದ ರೈತಮೋರ್ಚಾ ಸಮಾವೇಶ ಇನ್ನಿತರ ವಿಷಯಗಳ ಕುರಿತಾಗಿ ಮಂಗಳವಾರ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆಯನ್ನು ಗಟ್ಟಿಗೊಳಿಸುವ ಕುರಿತಾಗಿ ಹೆಚ್ಚಿನ ರೀತಿಯಲ್ಲಿ ಚರ್ಚಿಸಲಾಗಿದೆ. ಬೂತ್‌ಮಟ್ಟದಲ್ಲಿ ಶಕ್ತಿ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸುವ, ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಹೆಚ್ಚಿನ ಸ್ಥಾನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.
ಜತೆಗೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಆ ಕ್ಷೇತ್ರದಲ್ಲಿಯೂ ಪಕ್ಷ ಗೆಲುವು ಕಾಣುವಂತೆ ಮಾಡುವ ನಿಟ್ಟಿನಲ್ಲಿ ಸಮಾಲೋಚಿಸಲಾಯಿತು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಕೆಲವರು ಈಗಾಗಲೇ ತಾವೇ ಮುಂದಿನ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಗಳು ಬಂದಿದ್ದು, ಇಂತಹ ಕಾರ್ಯ ಮಾಡುವುದು ಬೇಡ. ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿರಿ, ಪಕ್ಷ ಯಾರಿಗೆ ಅವಕಾಶ ಕೊಡುತ್ತದೆಯೋ ಉಳಿದವರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಕಾರ್ಯ ಮಾಡಬೇಕೆಂದು ನಾಯಕರು ಸಲಹೆ ನೀಡಿದರು. ಹುಡಾ ಅಧ್ಯಕ್ಷರ ನೇಮಕ ವಿಚಾರವೂ ಚರ್ಚೆಗೆ ಬಂದಿತು.
ಅ.30ರಂದು ಕಲಬುರಗಿಯಲ್ಲಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ನಡೆಯಲಿದ್ದು, ನ.13ರಂದು ಹುಬ್ಬಳ್ಳಿಯಲ್ಲಿ ರೈತಮೋರ್ಚಾ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲವೆ ಇತರೆ ಕೇಂದ್ರ ನಾಯಕರು ಆಗಮಿಸುವ ಸಾಧ್ಯತೆ ಇದ್ದು, ಸುಮಾರು 3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಸಮಾವೇಶ ಯಶಸ್ವಿಗೆ ಶ್ರಮಿಸುವ, ಸಮಿತಿಗಳನ್ನು ರಚಿಸುವ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖಂಡರಾದ ಪ್ರದೀಪ ಶೆಟ್ಟರ, ಅರವಿಂದ ಬೆಲ್ಲದ, ಅಮೃತ ದೇಸಾಯಿ, ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಸೀಮಾ ಮಸೂತಿ, ವೀರಭದ್ರಪ್ಪ ಹಾಲಹರವಿ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ ಇನ್ನಿತರರು ಪಾಲ್ಗೊಂಡಿದ್ದರು.