Advertisement

7 ರಿಂದ ಬಿಜೆಪಿ ಪ್ರಕೋಷ್ಠದ ಸಮಾವೇಶ

03:37 PM May 05, 2022 | Niyatha Bhat |

ಶಿವಮೊಗ್ಗ: ಬಿಜೆಪಿ ಮತ್ತೆ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಮುಂಬರುವ ಚುನಾವಣೆಗೆ ಈಗಲೇ ಸಿದ್ಧತೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಮೇ 7ರಿಂದ 31ರ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಪ್ರಕೋಷ್ಠದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಂ.ಬಿ. ಭಾನುಪ್ರಕಾಶ್‌ ಹೇಳಿದರು.

Advertisement

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕೋಷ್ಠದ ಮೊದಲ ಸಮಾವೇಶ ತುಮಕೂರಿನಲ್ಲಿ ಮೇ 7ರಂದು ನಡೆಯಲಿದ್ದು, ಇದರ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೆರವೇರಿಸುವರು. ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ನಂತರ ವಿವಿಧ ಕಡೆಗಳಲ್ಲಿ ಪ್ರಕೋಷ್ಠದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆಯಾ ಸ್ಥಳದ ಸಚಿವರು, ಶಾಸಕರು, ಸಂಸದರು ಹಾಜರಾಗುವರು ಎಂದರು.

ಶಿವಮೊಗ್ಗದಲ್ಲಿ ಮೇ 15 ರಂದು ನಗರದ ಶುಭಶ್ರೀ ಸಮುದಾಯ ಭವನದಲ್ಲಿ ಪ್ರಕೋಷ್ಠದ ಜಿಲ್ಲಾ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಸಂಸದರು, ಸಚಿವರು, ಶಾಸಕರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಈ ಪ್ರಕೋಷ್ಠಗಳ ಸಮಾವೇಶ ಆಯೋಜಿಸಲಾಗಿದೆ. 39 ಪ್ರಕೋಷ್ಠಗಳಿವೆ. ಪ್ರತಿ ಪ್ರಕೋಷ್ಠದಲ್ಲಿ 9 ಜನರ ಸಮಿತಿ ಇರಲಿದ್ದು, 312 ಮಂಡಳಗಳನ್ನು ರಚಿಸಲಾಗಿದೆ. ವಿವಿಧ ಪ್ರಕೋಷ್ಠಗಳಲ್ಲಿ ಈಗಾಗಲೇ 30 ಸಾವಿರ ಕಾರ್ಯಕರ್ತರಿದ್ದು, ಇದನ್ನು 51 ಸಾವಿರಕ್ಕೆ ಹೆಚ್ಚಿಸಲಾಗಿದೆ. ಬಿಜೆಪಿಯ ವಿಚಾರಧಾರೆಯನ್ನು ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮುಟ್ಟಿಸುವುದು, ಮುಟ್ಟಿಸುವಲ್ಲಿ ಅಡೆತಡೆಗಳು ಬಂದಲ್ಲಿ ಸರ್ಕಾರದ ಗಮನಕ್ಕೆ ತರುವುದು ಈ ಪ್ರಕೋಷ್ಠಗಳ ಕಾರ್ಯ ವೈಖರಿಯಾಗಿದೆ. ರಾಜ್ಯ ಬಿಜೆಪಿ ಅಪೇಕ್ಷೆಯಂತೆ ಬೆನ್ನೆಲುಬಾಗಿ ಪಕ್ಷದ ಸೈನಿಕರಂತೆ ಈ ಪ್ರಕೋಷ್ಠಗಳು ಕಾರ್ಯನಿರ್ವಹಿಸಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ 24 ಪ್ರಕೋಷ್ಠಗಳಿದ್ದು, ಮೇ 15 ರಂದು ನಡೆಯುವ ಸಮಾವೇಶದಲ್ಲಿ 1600 ಪ್ರಕೋಷ್ಠಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಸಂಘಟನಾತ್ಮಕವಾಗಿ ಏನೇ ಕಾರ್ಯಕ್ರಮಗಳನ್ನು ಪಕ್ಷ ರೂಪಿಸಿದ್ದರೂ ಭ್ರಷ್ಟಾಚಾರದ ಆರೋಪಗಳು ಹೆಚ್ಚಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಭ್ರಷ್ಟಾಚಾರವನ್ನು ಒಪ್ಪುವುದಿಲ್ಲ. ಅದರ ವಿರುದ್ಧ ಪಕ್ಷ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಆರೋಪ ಸಾಬೀತಾಗುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ದೇಶದಲ್ಲಿ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಅವರ ನಾಯಕತ್ವದಲ್ಲೇ ಬಿಜೆಪಿ ಭ್ರಷ್ಟಾಚಾರ ರಹಿತ ಆಡಳಿತ ನೀಡಲಿದೆ ಎಂದರು.

Advertisement

ಬಿಜೆಪಿಯಲ್ಲಿ ಹೊಸ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯೇ ಒಂದು ಹೊಸ ಸಂಚಲನ ಮೂಡಿಸಿದ ಪಕ್ಷವಾಗಿದೆ. ಇಲ್ಲಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ವರಿಷ್ಠರು ಕೂಡ ಹೊಸತನಕ್ಕೆ ಆದ್ಯತೆ ನೀಡುತ್ತಾರೆ. ಇದು ಪ್ರಧಾನಿ ಮೋದಿಯಿಂದ ಹಿಡಿದು ಜಿಲ್ಲೆಯ ನಾಯಕರವರೆಗೂ ಹಬ್ಬಿದೆ. ಹಾಗೆಯೇ ಬಿಜೆಪಿ ಮಾಡಿದ ಪ್ರಯೋಗಗಳನ್ನು ಜನರು ಕೂಡ ಒಪ್ಪುತ್ತಿದ್ದಾರೆ. ಹಾಗಾಗಿ ಹೊಸಬರ ನಿರೀಕ್ಷೆ ಸಹಜವಾಗಿಯೇ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ. ಗಿರೀಶ್‌ ಪಟೇಲ್‌, ಎಸ್.ದತ್ತಾತ್ರಿ, ಎಸ್‌. ಜ್ಞಾನೇಶ್ವರ್‌, ಶಿವರಾಜ್‌, ಜಯರಾಮ್‌, ಸತೀಶ್‌, ದೇವರಾಜ್‌ ಮಂಡೇನಕೊಪ್ಪ, ಸೋಮೇಶ್‌ ಶೇಟ್‌, ವಿಕ್ರಮ್‌, ಸುಧಾಕರ್‌, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next