ಹಾಸನ: ಕಾವೇರಿ ಜಲ ವಿವಾದದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ಬದಿಗೊತ್ತಿ ರಾಜ್ಯದ ಹಿತವನ್ನು ಕಾಪಾಡಬೇಕು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಜಲ ವಿವಾದದಲ್ಲಿ ರಾಜ್ಯದ ಹಿತ ಕಾಪಾಡುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೊಳೆನರಸೀಪುರ ತಾಲೂಕು, ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ
ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ ಸಲ್ಲಿಸಲು ಶನಿವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ವಿವಾದದಲ್ಲಿ ಜಲಸಂಪನ್ಮೂಲ ಸಚಿವರು ಸಮಯಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಸಚಿವರೇ ಹೀಗೆ ಹೇಳಿದರೆ ರಾಜ್ಯದ ಹಿತಕ್ಕೆ ಧಕ್ಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಸಚಿವರು ಯಾವ್ಯಾವ ಸಂದರ್ಭದಲ್ಲಿ ಏನೇನು ಮಾತನಾಡಿದ್ದಾರೆ ಹಾಗೂ ಅದರ ದುಷ್ಪರಿಣಾಮ, ಸತ್ಪರಿಣಾಮ ಏನಾಗುತ್ತದೆ ಎಂಬುದರ ಬಗ್ಗೆ ಯೋಚನೆ ಮಾಡಬೇಕು. ನನ್ನ ಬಳಿಗೂ ಇಬ್ಬರು ಹಿರಿಯ ಅಧಿಕಾರಿಗಳನ್ನು ಸಚಿವರು ಕಳುಹಿಸಿದ್ದರು. ನನ್ನ ಆರೋಗ್ಯ ಸರಿಯಿಲ್ಲ. ಕಾವೇರಿ ವಿವಾದದಲ್ಲಿ ಏನು ಸಹಕಾರ ಬೇಕಾದರೂ ಕೊಡುವೆ ಎಂದು ಹೇಳಿ ಕಳುಹಿಸಿದ್ದೆ ಎಂದು ಸ್ಪಷ್ಟಪಡಿಸಿದ ಅವರು, ಕಾವೇರಿ ನೀರಿಗಾಗಿ ನನ್ನ ಹೋರಾಟ ಏನು ಎಂಬುದು ಇಡೀ ನಾಡಿನ ಜನತೆಗೆ ಗೊತ್ತಿದೆ ಎಂದರು.
ಪ್ರಜ್ವಲ್ ಸುಪ್ರೀಂಕೋರ್ಟ್‌ಗೆ ಹೋಗಲಿದ್ದಾರೆ
ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನದ ಅನರ್ಹತೆಗೆ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಎಚ್. ಡಿ.ದೇವೇಗೌಡ ಹೇಳಿದರು.
ಹೊಳೆನರಸೀಪುರ ತಾಲೂಕು, ಹಳೆಕೋಟೆ ಸಮೀಪದ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥ ಸ್ವಾಮಿ ಬೆಟ್ಟ ದಲ್ಲಿ ಶ್ರಾವಣ ಮಾಸದ ಪೂಜೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈ ಕೋರ್ಟ್ ತೀರ್ಪಿನ ಆರ್ಡರ್ ಕಾಪಿ ಇನ್ನೂ ಸಿಕ್ಕಿಲ್ಲ. ಅದನ್ನು ಓದದೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.