Advertisement

ಬಿಸಿಲಿಗೆ ಸೆಡ್ಡು ಹೊಡೆದ ಬಿಜೆಪಿ-ಕಾಂಗ್ರೆಸ್‌ ಪ್ರಚಾರ!

08:02 PM Apr 06, 2021 | Team Udayavani |

ಮಸ್ಕಿ : ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಕಹಳೆ ಮೊಳಗಿಸಲು ಘಟಾನುಘಟಿಗಳೇ ಸೋಮವಾರ ಅಖಾಡಕ್ಕೆ ಇಳಿದಿದ್ದು, ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ರಾಜಕೀಯ ಧುರೀಣರ ರಣಕೇಕೆ 40 ಡಿಗ್ರಿ ಸೆಲ್ಸಿಯಸ್‌ ಬಿರು ಬಿಸಿಲಿಗೂ ಸೆಡ್ಡು ಹೊಡೆದಂತಿತ್ತು!. ಉಪ ಚುನಾವಣೆ ರಣಕಣ ಅಕ್ಷರಶಃ ಮತ್ತೂಂದು ತಿರುವು ಪಡೆದಿರುವುದಕ್ಕೆ ಎರಡೂ ಪಕ್ಷದ ಪ್ರಚಾರ ವೈಖರಿ ಸಾಕ್ಷಿಯಾದವು.

Advertisement

ಇಷ್ಟು ದಿನ ಕೇವಲ ಮನೆ-ಮನೆ ಪ್ರಚಾರ, ಮತದಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಜನ-ಮನ ಗೆಲ್ಲುವ ಕಸರತ್ತು ನಡೆಸಿದ್ದ ಎರಡೂ ಪಕ್ಷದ ನಾಯಕರು ಸೋಮವಾರದಿಂದ ಪರಸ್ಪರ ಆರೋಪ-ಪ್ರತ್ಯಾರೋಪ, ಮಾತಿನ ಏಟು-ಎದಿರೇಟುಗಳ ಮೂಲಕ ಉಪ ಚುನಾವಣೆ ಅಖಾಡ ರಣಾಂಗಣವಾಗಿಸಿದರು. ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸರ್ಕಾರ, ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಪುತ್ರ ವಿಜಯೇಂದ್ರ, ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ವಿರುದ್ಧ ನೇರ ವಾಗ್ಧಾಳಿ ನಡೆಸಿ ಮತಕೊಯ್ಲು ನಡೆಸಿದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿಯ ಬಿ.ವೈ. ವಿಜಯೇಂದ್ರ, ಸಚಿವ ರೇಣುಕಾಚಾರ್ಯ ಸೇರಿ ಇತರೆ ಬಿಜೆಪಿ ವರಿಷ್ಠರು ಕಾಂಗ್ರೆಸ್‌ ನಾಯಕರನ್ನು ಟೀಕಿಸುವ ಮೂಲಕ ಸರ್ಕಾರದ ಸಾಧನೆ ಸಮರ್ಥಿಸಿಕೊಂಡು ಮಸ್ಕಿ ಅಖಾಡದಲ್ಲಿ ಪ್ರಚಾರದ ಧೂಳೆಬ್ಬಿಸಿದರು.

ನೆತ್ತಿ ಮೇಲೆ ಚುರ್‌ ಎನ್ನಿಸುವ ಬಿಸಿಲಿದ್ದರೂ, ಮೈಯೆಲ್ಲ ಬೆವರು ಹರಿದು ಬಟ್ಟೆ ಒದ್ದೆಯಾಗಿದ್ದರೂ, ನೆರೆದ ಜನಸ್ತೋಮದ ಉತ್ಸಾಹಕ್ಕೆ ಇದ್ಯಾವುದನ್ನೂ ಲೆಕ್ಕಿಸದೇ ಎರಡೂ ಪಕ್ಷದ ವರಿಷ್ಠರು ಪ್ರಚಾರದಲ್ಲಿ ಮುಳುಗಿದ್ದು ಕಂಡು ಬಂತು.

ಘಟಾನುಘಟಿಗಳ ಘರ್ಜನೆ:ನಾಮಪತ್ರ ಸಲ್ಲಿಕೆ ಬಳಿಕ ಮತ್ತೂಮ್ಮೆ ಮಸ್ಕಿ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮಸ್ಕಿ ಪ್ರವೇಶ ಗಡಿ ಹಳ್ಳಿಗಳಿಂದಲೇ ಕ್ಯಾಂಪೇನ್‌ ಆರಂಭಿಸಿದರು. ನೆರೆಯ ಕುಷ್ಟಗಿ ತಾಲೂಕಿನ ಮೂಲಕ ಮಸ್ಕಿ ವಿಧಾನಸಭೆ ಕ್ಷೇತ್ರದ ಊಮಲೂಟಿ ಗ್ರಾಮ ಪ್ರವೇಶ ಮಾಡಿದರು. ಮತಬೇಟೆಗೆ ಆಗಮಿಸಿದ್ದ ಕಾಂಗ್ರೆಸ್‌ ದಿಗ್ಗಜ ನಾಯಕರಿಗೆ ಹೂವಿನ ಸುರಿಮಳೆ ಮೂಲಕ ಸ್ವಾಗತಿಸಿಕೊಂಡ ಕಾರ್ಯಕರ್ತರು ಬೈಕ್‌ ರ್ಯಾಲಿ, ತೆರೆದ ವಾಹನದ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಕಲ್ಮಂಗಿ, ತುರುವಿಹಾಳ, ವಿರುಪಾಪುರ, ಗುಂಜಳ್ಳಿ, ಅರಳಹಳ್ಳಿ ಗ್ರಾಮಗಳ ಮೂಲಕ ಪ್ರಚಾರ ಯಾತ್ರೆ ಹೊರಟಿತು.

ಸಿಂಧನೂರಿನಲ್ಲಿ ಊಟದ ವಿರಾಮ. ಮತ್ತೆ ಗೌಡನಭಾವಿ, ಬಳಗಾನೂರು ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ತುರುವಿಹಾಳ, ಬಳಗಾನೂರು ಹೋಬಳಿ ಕೇಂದ್ರಗಳಲ್ಲಿ ಬಹಿರಂಗ ಸಮಾವೇಶದ ಮೂಲಕ ಗಡಿ ಭಾಗದ ಹಳ್ಳಿಗಳ ಜನರನ್ನು ಸೆಳೆಯುವ ಪ್ರಯತ್ನ ಮಾಡಿದರು. ಹೀಗೆ ಎರಡೂ ಪಕ್ಷದ ದಿಗ್ಗಜ ನಾಯಕರು ಸೋಮವಾರ ಒಂದೇ ದಿನ ಹಲವೆಡೆ ಪ್ರಚಾರದ ಧೂಳೆಬ್ಬಿಸಿದ್ದರಿಂದ ಮಸ್ಕಿ ಚುನಾವಣೆ ಕಣ ಮತ್ತೂಂದು ಹಂತ ತಲುಪಿದಂತಾಗಿದೆ. ಇನ್ನು ಎರಡು ದಿನಗಳ ಕಾಲ ಹೀಗೆ ನಾಯಕರ ಒಡ್ಡೋಲಗದ ಪ್ರಚಾರ ನಡೆಯಲಿದ್ದು, ಮತದಾರರ ಮೇಲೆ ಯಾವ ಪರಿಣಾಮ ಬೀರಲಿದೆಯೋ ಕಾದು ನೋಡಬೇಕಿದೆ.

Advertisement

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next