Advertisement

ಕುಂದಾನಗರಿಯಲ್ಲಿ ಕಮಲ ಮುಂದೆ, ಕೈ ಹಿಂದೆ

10:47 PM Apr 24, 2022 | Team Udayavani |

ಬೆಳಗಾವಿ : ರಾಜ್ಯ ರಾಜಕೀಯದಲ್ಲಿ ಗಡಿ ಜಿಲ್ಲೆ ಬೆಳಗಾವಿ ಯಾವಾಗಲೂ ಸುದ್ದಿ ಮಾಡುವ ಕೇಂದ್ರ. ಜಿಲ್ಲೆಯ ಎಷ್ಟೋ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿವೆ. ಈ ರೀತಿಯ ಘಟನೆಗಳು ಜಿಲ್ಲೆಗೆ ಹೊಸದೇನಲ್ಲ.

Advertisement

ಅದರಲ್ಲೂ ಚುನಾವಣೆಗಳು ಬಂದಾಗ ಹಾಗೂ ಸರಕಾರ ರಚಿಸುವ ವೇಳೆ ಯಾವ ರಾಜಕೀಯ ಪಕ್ಷಗಳೂ ಜಿಲ್ಲೆಯನ್ನು ಅವಗಣಿಸುವುದಿಲ್ಲ. ಬದಲಾಗಿ ಮೊದಲ ಆದ್ಯತೆ ನೀಡುತ್ತವೆ. ಅಂತೆಯೇ ಬೆಳಗಾವಿ ಜಿಲ್ಲೆ ರಾಜ್ಯ ರಾಜಕೀಯದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಬೆಂಗಳೂರು ಅನಂತರ ಅತೀ ಹೆಚ್ಚು ಅಂದರೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವುದರಿಂದ ಸಹಜವಾಗಿಯೇ ಎಲ್ಲರ ಕಣ್ಣು ಜಿಲ್ಲೆಯ ಮೇಲೆ ನೆಟ್ಟಿರುತ್ತದೆ.

ರಾಜಕಾರಣದ ಮಾತು ಬಂದಾಗ ಬೆಳಗಾವಿ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ಇಲ್ಲಿಯ ಹೊಂದಾಣಿಕೆ ರಾಜಕಾರಣ, ಕುಟುಂಬ ರಾಜಕಾರಣ ಬೇರೆ ಜಿಲ್ಲೆಗಳಿಗಿಂತ ವಿಭಿನ್ನ. ಇಲ್ಲಿಯ ಪ್ರಚಾರ ವೈಖರಿ, ಅಭ್ಯರ್ಥಿಗಳ ನಡೆ ವಿಭಿನ್ನ ಹಾಗೂ ಅಷ್ಟೇ ಕುತೂಹಲ. ಈ ರಾಜಕೀಯ ಶಕ್ತಿ ಕೇಂದ್ರದಲ್ಲೀಗ ನಿಧಾನವಾಗಿ ಮುಂಬರುವ ವಿಧಾನಸಭೆ ಚುನಾವಣೆ ತಾಲೀಮು ಸಹ ಆರಂಭವಾಗಿದೆ. ಅಭ್ಯರ್ಥಿಗಳ ಸ್ಪಷ್ಟ ಚಿತ್ರಣವಿಲ್ಲ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಪ್ರಮುಖ ಆಕಾಂಕ್ಷಿಗಳು ಟಿಕೆಟ್‌ ಸಿಗುವ ವಿಶ್ವಾಸದಲ್ಲಿ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದಾರೆ.

ಆಂತರಿಕ ಮನಸ್ತಾಪ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡರಲ್ಲೂ ಇವೆ. ಟಿಕೆಟ್‌ಗಾಗಿ ಒಬ್ಬರು ಇನ್ನೊಬ್ಬರ ಕಾಲೆಳೆಯುವ ಪ್ರವೃತ್ತಿ ಜೋರಾಗಿದೆ. ಇದು ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರುವುದು ಸುಳ್ಳಲ್ಲ. ಹೀಗಾಗಿ ಅಸಮಾಧಾನಿತರನ್ನು ಈಗಿನಿಂದಲೇ ಸಮಾಧಾನ ಪಡಿಸುವ ಪ್ರಯತ್ನ ಎರಡೂ ಪಕ್ಷಗಳಲ್ಲಿ ಕಾಣುತ್ತಿದೆ. ಚುನಾವಣೆ ಸಿದ್ಧತೆ ವಿಷಯದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್‌ಗಿಂತ ಒಂದೆರಡು ಹೆಜ್ಜೆ ಮುಂದೆಯೇ ಇದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ನಡೆದ ಬೆಳಗಾವಿ ವಿಭಾಗಮಟ್ಟದ ಪ್ರಮುಖರ ಸಭೆ ಮುಂಬರುವ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ಹಾಗೂ ಸಿದ್ಧತೆಗೆ ಮುನ್ನಡಿ ಬರೆದಿದೆ. ರಾಜ್ಯದ ಉಸ್ತುವಾರಿ ಅರುಣ್‌ ಸಿಂಗ್‌ ಪಕ್ಷದೊಳಗಿನ ಎಲ್ಲ ಭಿನ್ನಮತಗಳನ್ನು ಬದಿಗಿಟ್ಟು ಈಗಿನಿಂದಲೇ ಒಂದಾಗಿ ಕೆಲಸ ಮಾಡಬೇಕೆಂಬ ಸಂದೇಶ ನೀಡಿದ್ದಾರೆ.

ಈಗಿನ ಬೆಳವಣಿಗೆಗಳ ಪ್ರಕಾರ ಬಿಜೆಪಿಯಲ್ಲಿ ಟಿಕೆಟ್‌ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಅಂತಹ ಸಮಸ್ಯೆ ಕಂಡಿಲ್ಲ. ಆದರೆ ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಬೈಲಹೊಂಗಲ, ಖಾನಾಪುರ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಹೆಚ್ಚು ಪೈಪೋಟಿ ಕಾಣುತ್ತಿದೆ. ಪಕ್ಷದಲ್ಲಿ ಸದ್ಯ ಯಾರೂ ಕ್ಷೇತ್ರ ಬದಲಾವಣೆ ಬಗ್ಗೆ ಮನಸ್ಸು ಮಾಡಿಲ್ಲ. ಇನ್ನು ಕಾಂಗ್ರೆಸ್‌ನಲ್ಲಿ ಚುನಾವಣೆ ತಯಾರಿ ಅಷ್ಟು ಬಿರುಸು ಪಡೆದುಕೊಂಡಿಲ್ಲ. ಪಕ್ಷದ ಸಭೆಗಳು ನಡೆದಿದ್ದರೂ ಅದು ಒಂದೆರಡು ಕ್ಷೇತ್ರಗಳಿಗೆ ಸೀಮಿತವಾದಂತೆ ಕಾಣುತ್ತಿವೆ. ಹಾಲಿ ಶಾಸಕರು ಕ್ಷೇತ್ರ ಬದಲಾವಣೆಗೆ ಮನಸ್ಸು ಮಾಡಿಲ್ಲ. ಆದರೆ ಬೆಳಗಾವಿ ದಕ್ಷಿಣ, ಉತ್ತರ, ಅರಭಾವಿ, ಸವದತ್ತಿ, ಹುಕ್ಕೇರಿ, ರಾಯಬಾಗ, ನಿಪ್ಪಾಣಿ, ಕುಡಚಿ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಪೈಪೋಟಿ ನಡೆದಿದೆ.

Advertisement

ಹೊಸ ಮುಖಗಳಿಗೆ ಅವಕಾಶ?
ಈಗಿನ ಬೆಳವಣಿಗೆ ಪ್ರಕಾರ ಬಿಜೆಪಿಯಲ್ಲಿ ಒಂದೆರಡು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಒಂದಿಬ್ಬರು ಶಾಸಕರು ಟಿಕೆಟ್‌ ವಂಚಿತರಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಕಾಂಗ್ರೆಸ್‌ನಲ್ಲಿ ಸಹ ಕೆಲವು ಬದಲಾವಣೆಗಳು ಕಾಣಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗೋಕಾಕ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಜಾರಕಿಹೊಳಿ ಕುಟುಂಬದ ಸದಸ್ಯರ ಹೊರತಾಗಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next