ಹೊಸದಿಲ್ಲಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಸಚಿವ ಸತ್ಯೇಂದರ್ ಜೈನ್ ಅವರದೊಂದು ವಿಡಿಯೋ ಇದೀಗ ಹರಿದಾಡುತ್ತಿದೆ.
ಈ ವರ್ಷದ ಮೇ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ದೆಹಲಿಯ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋವನ್ನು ಹಲವು ಬಿಜೆಪಿ ನಾಯಕರು ಇಂದು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ರಾಷ್ಟ್ರ ರಾಜಧಾನಿಯಲ್ಲಿ ರಾಜಕೀಯದ ವಸ್ತುವಾಗಿದೆ.
ಜೈಲಿನಲ್ಲಿರುವ ಸಚಿವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದಲ್ಲಿ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಅಮಾನತುಗೊಳಿಸಿದ ಕೆಲವೇ ದಿನಗಳಲ್ಲಿ ವೀಡಿಯೊ ಹೊರಬಂದಿದೆ.
ಇಂದು ಬಿಡುಗಡೆಯಾದ ವೀಡಿಯೋದಲ್ಲಿ ಸತ್ಯೇಂದರ್ ಜೈನ್ ತಿಹಾರ್ ಜೈಲಿನ ತನ್ನ ಸೆಲ್ ನಲ್ಲಿ ಕಾಲು, ಬೆನ್ನು ಮತ್ತು ತಲೆಗೆ ಮಸಾಜ್ ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಆಧಾರದಲ್ಲಿ ಬಿಜೆಪಿಯು ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಆಮ್ ಆದ್ಮಿ ಪಕ್ಷವು ಅಸಂಬದ್ಧ ಮತ್ತು ಆಧಾರರಹಿತ ಆರೋಪಗಳನ್ನು ತಳ್ಳಿಹಾಕಿದೆ.