Advertisement

ದೇಗುಲ ಭೇಟಿ ಈಗ ಅಮಿತ್‌ ಶಾ ಸರದಿ ​​​​​​​

06:00 AM Feb 09, 2018 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರೆ, ಇದೀಗ ದೇವಸ್ಥಾನಗಳ ಭೇಟಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸರದಿ. ದೇವಸ್ಥಾನ ಭೇಟಿಯೊಂದಿಗೆ ಕರಾವಳಿ ಜಿಲ್ಲೆಯಳಲ್ಲಿ ಹಿಂದುತ್ವದ ಮತಬ್ಯಾಂಕ್‌ ಸೃಷ್ಟಿಗೂ ಅವರು ಪ್ರಯತ್ನಿಸಲಿದ್ದಾರೆ.

Advertisement

ಈ ತಿಂಗಳ 18, 19 ಮತ್ತು 20ರಂದು ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಅಮಿತ್‌ ಶಾ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ, ಉಡುಪಿ ಜಿಲ್ಲೆಯ ಕೃಷ್ಣಮಠ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಅಲ್ಲದೆ, ಇತ್ತೀಚೆಗೆ ಹತ್ಯೆಯಾಗಿರುವ ಮಂಗಳೂರು ಸಮೀಪದ ಕಾಟಿಪಳ್ಳ ನಿವಾಸಿ ದೀಪಕ್‌ ರಾವ್‌ ಮತ್ತು ಹೊನ್ನಾವರದಲ್ಲಿ ಹತ್ಯೆಗೊಳಗಾದ ಪರೇಶ್‌ ಮೇಸ್ತಾ ನಿವಾಸಗಳಿಗೂ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಸ್ಥಳಕ್ಕೆ ತೆರಳಿದ್ದರು. ಹೀಗಾಗಿ ಅಮಿತ್‌ ಶಾ ಅವರ ದೇವಸ್ಥಾನ ಭೇಟಿಯಲ್ಲಿ ಧರ್ಮಸ್ಥಳ ಇಲ್ಲ. ಅದರ ಬದಲಾಗಿ ಕರಾವಳಿ ಜಿಲ್ಲೆಗಳ ಇತರೆ ಮೂರು ಪ್ರಮುಖ ದೇವಾಲಯಗಳಿವೆ.

ಫೆ. 18ರಂದು ಸಂಜೆ ದೆಹಲಿಯಿಂದ ವಿಮಾನದಲ್ಲಿ ನೇರವಾಗಿ ಮಂಗಳೂರಿನಲ್ಲಿ ಬಂದಿಳಿಯಲಿರುವ ಅಮಿತ್‌ ಶಾ ಅಲ್ಲಿಂದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಕುಕ್ಕೆ ಸುಬ್ರಮಣ್ಯದಲ್ಲಿ ಫೆ. 19ರಂದು ಬೆಳಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾರೆ. ಅಲ್ಲಿಂದ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಗೆ ತೆರಳಲಿರುವ ಶಾ, ಕಾಲೇಜು ಮೈದಾನದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವರು. ನಂತರ ಬಂಟ್ವಾಳದಲ್ಲಿ ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳುವರು.

Advertisement

ಅದೇ ದಿನ ಮಧ್ಯಾಹ್ನ 3 ಗಂಟೆಗೆ ಮಂಗಳೂರು ಸಮೀಪದ ಕಾಟಿಪಳ್ಳದಲ್ಲಿ ಇತ್ತೀಚೆಗೆ ಹತ್ಯೆಗೊಳಗಾಗಿರುವ ದೀಪಕ್‌ ರಾವ್‌ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಸುರತ್ಕಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಂಜೆ 5 ಗಂಟೆಗೆ ಉಡುಪಿಯ ಮಲ್ಪೆ ಬೀಚ್‌ಗೆ ಹೋಗಿ ಅಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ ಎಂಟು ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ತೆರಳಿ ಅಷ್ಟ ಮಠದ ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸುವರು.

ಅಂದು ಉಡುಪಿಯಲ್ಲಿ ವಾಸ್ತವ್ಯ ಹೂಡುವ ಅಮಿತ್‌ ಶಾ ಫೆ. 20ರಂದು ಉಡುಪಿಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ಸಮಾವೇಶ ಮತ್ತು ಮಂಗಳೂರು-ಶಿವಮೊಗ್ಗ ಶಕ್ತಿ ಕೇಂದ್ರಗಳ ಉಸ್ತುವಾರಿಗಳ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಹೊನ್ನಾವರಕ್ಕೆ ತೆರಳಿ ಇತ್ತೀಚೆಗೆ ಹತ್ಯೆಗೊಳಗಾದ ಪರೇಶ್‌ ಮೇಸ್ತಾ ಕುಟುಂಬ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಅಲ್ಲದೆ, ಕುಮಟಾದಲ್ಲಿ ಭಟ್ಕಳ, ಕುಮಟಾ ಮತ್ತು ಕಾರವಾರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸುವರು. ಅಲ್ಲಿಂದ ಶಿರಸಿಗೆ ತೆರಳಲಿರುವ ಶಾ, ಶಿರಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ಹುಬ್ಬಳ್ಳಿಗೆ ಆಗಮಿಸಿ ವಿಮಾನದ ಮೂಲಕ ದೆಹಲಿಗೆ ವಾಪಸಾಗುವರು.

Advertisement

Udayavani is now on Telegram. Click here to join our channel and stay updated with the latest news.

Next