ಹಾಸನ: ಜೆ.ಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ದಲ್ಲಿ ಮಂಜೂರಾಗಿ, ಕಾಮಗಾರಿಗಳು ಆರಂಭವಾಗಿ ರುವ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲೇಬೇಕು. ಬಿಜೆಪಿ ಸರ್ಕಾರವೇನಾ ದರೂ ದ್ವೇಷದ ರಾಜಕಾರಣ ಮಾಡಲು ಮುಂದಾ ದರೆ ಹೋರಾಟ ಮಾಡುವುದು ನಿಶ್ಚಿತ ಎಂದು ಸಕಲೇಶಪುರ ಕ್ಷೇತ್ರದ ಶಾಸಕರೂ ಆದ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ರಾಜ್ಯ ಜೆಡಿಎಸ್ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಹಾಸನ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಲ್ಲಾ ಕಾಮಗಾರಿಗಳಿಗೂ ಅನುದಾನ: ಸಮ್ಮಿಶ್ರ ಸರ್ಕಾರ ಕಳೆದ 14 ತಿಂಗಳಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜನಪರ ಕೆಲಸ ಮಾಡಿದೆ. ಹಲವರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೆಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೂ ಮಂಜೂರಾತಿ ನೀಡಿದ್ದು, ಕಾಮಗಾರಿಗಳೂ ಆರಂಭವಾಗಿವೆ. ಆ ಎಲ್ಲಾ ಕಾಮಗಾರಿಗಳಿಗೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೂ ಅನುದಾನ ನೀಡಲೇಬೇಕು ಎಂದರು.
ವಿಶೇಷವಾಗಿ ಹಾಸನ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದ ಎಚ್.ಡಿ.ರೇವಣ್ಣ ಜಿಲ್ಲೆಗೆ ಸಾವಿರಾರು ಕೋಟಿ ರೂ.ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ. ಆ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಅನುದಾನ ನೀಡಬೇಕು. ಯಾವುದೇ ಯೋಜನೆಗಳನ್ನೂ ನಿಲ್ಲಿಸಲು ಸಾಧ್ಯ ವಿಲ್ಲ. ನಿಲ್ಲಿಸಲು ಬಿಡುವುದೂ ಇಲ್ಲ. ಅಂತಹ ದ್ವೇಷದ ರಾಜಕಾರಣ ಮಾಡಲು ಸರ್ಕಾರ ಮುಂದಾದರೆ ಹೋರಾಟ ಮಾಡಿಯಾದರೂ ಅನುದಾನ ತರುವ ಶಕ್ತಿ ಜೆಡಿಎಸ್‌ಗಿದೆ ಎಂದು ಹೇಳಿದರು.
ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡ್ತೇವೆ: ಯಾವುದೇ ಪಕ್ಷದ ಶಾಸಕರೂ ಚುನಾವಣೆ ಹೋಗಲು ಸಿದ್ಧರಿಲ್ಲ. ಆದರೆ, ಚುನಾವಣೆ ಎದು ರಾದರೂ ಸಿದ್ಧವಿದೆ. ಸರ್ಕಾರದ ವಿರುದ್ಧ ಹೋರಾಟ ಹೇಗಿರಬೇಕೆಂಬುದರ ಬಗ್ಗೆ ಪಕ್ಷದ ನಾಯಕರು ಶೀಘ್ರ ಸಭೆ ಸೇರಿ ಚರ್ಚೆ ನಡೆಸುತ್ತೇವೆಂದರು.
ಧನ ವಿನಿಯೋಗ ವಿಧೇಯಕ ಜು.31 ರೊಳಗೆ ಅಂಗೀಕಾರವಾಗಲೇಬೇಕು. ಇಲ್ಲವೇ ಹೊಸ ಬಜೆಟ್ ಮಂಡನೆಯಾಗಬೇಕು. ಇನ್ನು 3 ದಿನ ಗಳೊಳಗೆ ವಿಧಾನಸಭೆ ಅಧಿವೇಶನ ಕರೆದರೆ ಹಣಕಾಸು ವಿಧೇಯಕಕ್ಕೆ ಜೆಡಿಎಸ್ ಅನುಮೋದನೆ ನೀಡಲು ಸಿದ್ಧವಿದೆ. ಸಮ್ಮಿಶ್ರ ಸರ್ಕಾರ 4 ತಿಂಗಳ ಹಣಕಾಸು ಮಸೂದೆಗೆ ಅನುಮೋದನೆ ಪಡೆದಿತ್ತು. ಇನ್ನು 8 ತಿಂಗಳ ಅವಧಿಯ ಹಣಕಾಸು ವಿಧೇಯಕಕ್ಕೆ ಅನುಮೋದನೆ ಸಿಗಬೇಕಿದೆ ಎಂದರು.