ಬೆಂಗಳೂರು : ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಜಯ ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಎರಡು ಉಪಚುನಾವಣೆಗೂ ಪಕ್ಷದಿಂದ ಬಹಳಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ. ಎರಡು ಕ್ಷೇತ್ರದಲ್ಲೂ ಪ್ರತ್ಯೇಕ ಸಭೆ ನಡೆದಿದೆ. ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸೋಮವಾರ(ಅಕ್ಟೋಬರ್-3) ನಡೆಯಲಿರುವ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಿದ್ದೇವೆ. ಅಲ್ಲಿಂದಲೇ ಅಂತಿಮ ಹೆಸರು ಘೋಷಣೆಯಾಗಲಿದೆ ಎಂದು ತಿಳಿಸಿದರು.
ಬೂತ್ ಮಟ್ಟದಿಂದಲೇ ಕಾರ್ಯಾ ಆರಂಭವಾಗಿದೆ. ಸದ್ಯದ ವಾತಾವರಣದಂತೆ ಬಿಜೆಪಿ ಅಭ್ಯರ್ಥಿಗಳು ಎರಡೂ ಕ್ಷೇತ್ರದಲ್ಲೂ ಅತ್ಯಧಿಕ ಮತಗಳ ಅಂತರದಿಂದ ಜಯ ಸಾಧಿಸಲಿದ್ದಾರೆ. ಕಾರ್ಯಕರ್ತರ ಸಭೆಯೂ ನಡೆದಿದೆ. ಎರಡು ಕ್ಷೇತ್ರಕ್ಕೂ ಪ್ರತ್ಯೇಕ ಉಸ್ತುವಾರಿಗಳ ನೇಮಕವೂ ನಡೆಯಲಿದೆ ಎಂದು ವಿವರ ನೀಡಿದರು.
ಇದನ್ನೂ ಓದಿ:“ಮದುವೆಗಳ ಬದಲಿಗೆ ವಿಚ್ಛೇದನಗಳನ್ನು ಸಂಭ್ರಮಿಸಬೇಕು” : ರಾಮ್ ಗೋಪಾಲ್ ವರ್ಮಾ
ಇತ್ತೀಚೆಗೆ ಆತ್ಮಹತ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ನಿಜಕ್ಕೂ ಎಲ್ಲರೂ ಚಿಂತನೆ ಮಾಡಬೇಕಾದ ವಿಷಯವಾಗಿದೆ. ಒತ್ತಡ ಸೇರಿದಂತೆ ಬೇರೆ ಬೇರೆ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ತಪ್ಪಿಸಬೇಕು. ಸರ್ಕಾರ, ಸಮಾಜ ಎಲ್ಲರೂ ಕೂಡ ಕೆಲಸ ಮಾಡಬೇಕು. ಕುಟುಂಬದ ಸದಸ್ಯರು ಅನ್ಯೋನ್ಯವಾಗಿ ಇರಬೇಕಾಗುತ್ತದೆ. ಆತ್ಯಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಸಮಸ್ಯೆ ತಾತ್ಕಾಲಿಕ, ಅದಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಸುಖ, ದುಃಖ ಬದುಕಿನ ಅವಿಭಾಗ್ಯ ಅಂಗ, ಎಲ್ಲವನ್ನು ತಾತ್ವಿಕವಾಗಿ ತೆಗೆದುಕೊಳ್ಳಬೇಕು. ಆರ್ಥಿಕ, ಸಾಮಾಜಿಕ, ವೈಯಕ್ತಿ, ಮಾಸಿಕ ಕಾರಣಗಳಿಂದ ಉಂಟಾಗುವ ತಾತ್ಕಾಲಿಕ ನೋವಿಗೆ ಆತ್ಮಹತ್ಯೆ ಪರಿಹಾರವಲ್ಲ. ಶಾಲಾ ಕಾಲೇಜುಗಳಿಂದಲೇ ಸಾಮಾಜಿಕ ವ್ಯವಸ್ಥೆ ಈ ನಿಟ್ಟಿನಲ್ಲಿ ಸರಿದೂಗಿಸುವ ಕಾರ್ಯ ಆಗಬೇಕು ಎಂದು ಹೇಳಿದರು.