ಸುರಪುರ: ಇಲ್ಲಿಯ ನಗರಸಭೆಗೆ ಪ್ರಪ್ರಥಮ ಬಾರಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ನಗರ ಸಭೆ ಆಡಳಿತ ತನ್ನ ತೆಕ್ಕೆಗೆ ಪಡೆದಿದೆ. ಆಟಕ್ಕುಂಟು ಲೆಕಕ್ಕಿಲ್ಲ ಎನ್ನುವಂತ್ತಿದ್ದ ಜೆಡಿಎಸ್ ಕೇವಲ ಮೂರು ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ ಒಂದು ಸ್ಥಾನದಲ್ಲಿ ಗೆಲುವು ಸಾಧಿಸದೆ ಮೂರು ಜನ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸುವ ಮೂಲಕ ಠೇವಣಿ ಕಳೆದು ಕೊಂಡಿದ್ದಾರೆ.
ಇಲ್ಲಿಯ ನಗರಸಭೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 31 ವಾರ್ಡ್‌ಗಳಲ್ಲಿ ಭಾರತೀಯ ಜನತಾ
ಪಕ್ಷದ ಅಭ್ಯರ್ಥಿಗಳು 16 ವಾರ್ಡ್‌ಗಳಲ್ಲಿ ಜಯಗಳಿಸಿದರೆ, ತೀವ್ರ ಪೈಪೋಟಿ ನೀಡದ್ದ ಕಾಂಗ್ರೆಸ್ ಪಕ್ಷ 15 ಸ್ಥಾನಗಳಲ್ಲಿ
ಜಯ ಗಳಿಸಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
ಇಲ್ಲಿಯ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಬೆಳಗ್ಗೆ 8:00 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಪ್ರತಿಯೊಂದು ಸುತ್ತಿನಲ್ಲೂ ಕಾಂಗ್ರೆಸ್, ಬಿಜೆಪಿ ನಡುವೆ ಗೆಲುವಿನಲ್ಲಿ ಪೈಪೋಟಿ ಏರ್ಪಟಿತ್ತು. ಎರಡು ಪಕ್ಷಗಳ ಅಭ್ಯರ್ಥಿಗಳು ತಲಾ 15 ವಾರ್ಡಗಳಲ್ಲಿ ಜಯಗಳಿಸಿ, ಸಮಾನ ಫಲಿತಾಂಶ ಕಾಯ್ದು ಕೊಂಡಿದ್ದರು. ಆದರೆ ಕೊನೆ ಸುತ್ತಿನಲ್ಲಿ ಸತ್ಯಂಪೇಟೆಯ ವಾರ್ಡ್ ನಂ 31ರ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿ ಅಚ್ಚರಿ ಫಲಿತಾಂಶ ತಂದು ಕೊಟ್ಟಿತು.
ಬಿಜೆಪಿ ಅಭ್ಯರ್ಥಿಗಳು ಒಟ್ಟು 16 ವಾರ್ಡ್‌ಗಳಲ್ಲಿ ಜಯಗಳಿಸಿ ನಗರಸಭೆಯಲ್ಲಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾದರು. ಯಾದಗಿರಿ ಸಹಾಯಕ ಆಯುಕ್ತ ಮಂಜುನಾಥ ಸ್ವಾಮಿ, ತಹಶೀಲ್ದಾರ್ ಸುರೇಶ ಅಂಕಲಗಿ, ಪಿಆರ್‌ಒ ಮತ್ತು ಎಪಿಆರ್
ಗಳು ಮತ ಎಣಿಕೆ ಪ್ರಕ್ರಿಯೆಯಲ್ಲಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಡಾ ಮಾರ್ಟಿನ್ ಮಾರ್ಬನ್ಯಾಂಗ್
ಚುನಾವಣಾ ಕೇಂದ್ರಕ್ಕೆ ಭೇಟಿ ನೀಡಿದರು.
ಮತ ಎಣಿಕೆ ಮುಂಭಾಗದಲ್ಲಿ ಫಲಿತಾಂಶ ತಿಳಿಯಲು ಪ್ರಮುಖ ಪಕ್ಷಗಳ ನೂರಾರು ಕಾರ್ಯಕರ್ತರು ಸೇರಿದ್ದರು. ಮತ ಎಣಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬಿಜೆಪಿ ವಿಜಯೋತ್ಸವ: ಬಿಜೆಪಿ ಕಾರ್ಯಕರ್ತರು ಶಾಸಕ ರಾಜುಗೌಡ ಅವರ ನಿವಾಸದಲ್ಲಿ ವಿಜಯೋತ್ಸವ ಆಚರಿಸಿದರು. 16 ವಾರ್ಡ್‌ಗಲ್ಲಿ ಜಯಗಳಿಸಿದ ಅಭ್ಯರ್ಥಿಗಳು, ಕಾರ್ಯಕರ್ತರು ಪರಸ್ಪರ ಗುಲಾಲ್ ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಪಟ್ಟರು.
ಕಾಂಗ್ರೆಸ್ ವಿಜಯೋತ್ಸವ : ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿವಾಸದಲ್ಲಿ ವಿಜಯೋತ್ಸವ ಆಚರಿಸಿದರು. 15 ವಾರ್ಡಗಳಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು, ಕಾರ್ಯಕರ್ತರು ಪರಸ್ಪರ ಗುಲಾಲ್ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.