Advertisement

ಕಾರವಾರದಲ್ಲಿ ಪ್ರಥಮ ಮಹಿಳಾ ಶಾಸಕಿ

12:01 PM May 16, 2018 | Team Udayavani |

ಕಾರವಾರ: ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ರೂಪಾಲಿ ನಾಯ್ಕ ಗೆಲುವು ಸಾಧಿ ಸಿದರು. ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ ಅಭ್ಯರ್ಥಿ, ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಅವರನ್ನು 14064 ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ 60339 ಮತಗಳಿಸಿದ್ದು, ಬಿಜೆಪಿ ಕಾರವಾರ ಕ್ಷೇತ್ರವನ್ನು ಮತ್ತೂಮ್ಮೆ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಿಜೆಪಿ ಕಾರ್ಯಕರ್ತರ ಪರಿಶ್ರಮ ಕೊನೆಗೂ ಫಲ ನೀಡಿತು. ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ 46275 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಶಾಸಕ ಸತೀಶ್‌ ಸೈಲ್‌ 45071 ಮತಗಳಿಸಿ ತೃತೀಯ ಸ್ಥಾನ ಪಡೆದರು. ಎನ್‌ಸಿಪಿ ಅಭ್ಯರ್ಥಿಯಾಗಿದ್ದ ಮಾಧವ ನಾಯ್ಕ 3716 ಮತಗಳಿಸಿದರೆ, ಜನ ಸಂಭಾವನಾ ಪಕ್ಷದ ಕುಂದಾಬಾಯಿ ಪುರುಳೇಕರ್‌ 1616 ಮತ ಪಡೆದರು. ಪಕ್ಷೇತರ ಅಭ್ಯರ್ಥಿ ಕಿಶೋರ ಸಾವಂತ 685 ಮತಗಳಿಸಿದರು. 2349 ನೋಟಾ ಮತಗಳು ಸಹ ಕಾರವಾರ ಕ್ಷೇತ್ರದಲ್ಲಿ ದಾಖಲಾದವು. ಕ್ಷೇತ್ರದಲ್ಲಿ 217686 ಮತಗಳ ಪೈಕಿ, 158876 ಮತಗಳು ಚಲಾವಣೆಯಾಗಿದ್ದು, ಶೇ.72.98 ರಷ್ಟು ಮತದಾನ ದಾಖಲಾಗಿತ್ತು.

ಕುಮಟಾದ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಪ್ರಾರಂಭವಾದಾಗ ಆರಂಭದ ಐದು ಸುತ್ತಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ಮುನ್ನೆಡೆ ಸಾಧಿಸಿದ್ದರು. ಮುನ್ನಡೆಯ ಪ್ರಮಾಣ 484 ರಷ್ಟಿತ್ತು. ನಂತರದ ಸುತ್ತಿನಲ್ಲಿ 2465 ತಲುಪಿತ್ತು. ನಂತರ 438ಕ್ಕೆ ಕುಸಿಯಿತು. ನಂತರದ ಸುತ್ತಿನಲ್ಲಿ ಮುನ್ನಡೆಯ ಮತಗಳ ಸಂಖ್ಯೆ 30ಕ್ಕೆ ಕುಸಿಯಿತು. ನಂತರ 50 ಮತಗಳಿಗೆ ಹೆಚ್ಚಳವಾಯಿತು. ಇದಾದ ನಂತರ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಮತಗಳ ಅಂತರ 3148 ಮುನ್ನಡೆ ಪಡೆಯಿತು. ನಂತರ 4093ಕ್ಕೆ ಹೆಚ್ಚಾಯಿತು. ಇದಾದ ನಂತರದ ಸುತ್ತುಗಳಲ್ಲಿ ಬಿಜೆಪಿ ಅಭ್ಯರ್ಥಿ ಮತಗಳ ಅಂತರ ಹೆಚ್ಚುತ್ತಲೇ ಹೋಯಿತು. ಅಂತಿಮ ಸುತ್ತು ಹಾಗೂ ಅಂಚೆ ಮತಗಳನ್ನು ಲೆಕ್ಕಹಾಕಿದಾಗ ಅವರ ಗೆಲುವಿನ ಅಂತರ 14064 ತಲುಪಿತ್ತು. ಒಟ್ಟು ಚಲಾವಣೆ ಮತಗಳಲ್ಲಿ 60339 ಮತಗಳನ್ನು ರೂಪಾಲಿ ನಾಯ್ಕ ಪಡೆದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಗೆಲ್ಲುತ್ತಿದ್ದಂತೆ ಪಕ್ಷದ ಹಿರಿಯರ ಜೊತೆ ಕೌಂಟಿಂಗ್‌ ಸೆಂಟರ್‌ನಿಂದ ಆಗಮಿಸಿದ ಅವರು ಮಾಧ್ಯಮಗಳ ಎದುರು ಪಕ್ಷದ ಗೆಲುವಿಗೆ ಕಾರ್ಯಕರ್ತರ ಶ್ರಮ, ಮೋದಿ ಅಲೆ ಕಾರಣ ಎಂದು ಹೇಳಿದರು.

ಕರಾವಳಿಯಲ್ಲಿ ಮೋದಿ ಅಲೆ ಕೆಲಸ ಮಾಡಿದ್ದು ಬಿಜೆಪಿ ಗೆಲುವಿಗೆ ಪ್ರಮುಖ ಕಾರಣ. ಹಿಂದುತ್ವ ಮತ್ತು ರಾಷ್ಟ್ರೀಯತೆ ಅತ್ಯಂತ ಪ್ರಖರವಾಗಿ ಬಿಜೆಪಿ ಮುಖಂಡರು ಮತದಾರರಿಗೆ ತಲುಪಿಸಿದ್ದರು. ಆಡಳಿತ ಪಕ್ಷದ ವಿರೋಧಿ  ಅಲೆಯನ್ನು ಸೃಷ್ಟಿಸುವಲ್ಲಿ ಬಿಜೆಪಿ ಸಂಘ ಪರಿವಾರ ಯಶಸ್ವಿಯಾಗಿತ್ತು. ಪರೇಶ್‌ ಮೇಸ್ತ ಹತ್ಯೆಯ ಪ್ರಕರಣವನ್ನು ಸಮರ್ಥವಾಗಿ ಬಿಜೆಪಿ ಬಳಸಿಕೊಂಡಿತ್ತು.

ಚುನಾವಣೆಗೆ ಘೋಷಣೆಗೆ ಮುನ್ನ ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ಸಭೆಗಳನ್ನು ಭಟ್ಕಳ, ಕುಮಟಾ, ಶಿರಸಿ, ಮುಂಡಗೋಡ, ಹಳಿಯಾಳಗಳಲ್ಲಿ ಸಂಘಟಿಸಿತ್ತು. ಚುನಾವಣೆ ಘೋಷಣೆಗೆ ಮುನ್ನ ನಂತರ ಅಮಿತ್‌ ಶಾ ಹೊನ್ನಾವರದಲ್ಲಿನ ಪರೇಶ್‌ ಮೇಸ್ತಾ ಕುಟುಂಬವನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆಶೀರ್ವಾದ ಮತ್ತು ಸಂಸದ ಅನಂತಕುಮಾರ್‌ ಹೆಗಡೆ ಅವರ ಅಬ್ಬರದ ಪ್ರಚಾರದಲ್ಲಿ ರಾಜಕೀಯ ಗೆಲುವು ಸಾಧಿ ಸಿರುವ ಇವರು ಸ್ವಲ್ಪ ಮಟ್ಟಿಗೆ ಸ್ವಪಕ್ಷೀಯರ ಭಿನ್ನಾಭಿಪ್ರಾಯದ ನಡುವೆಯೂ ಗೆಲುವು ಸಾಧಿ ಸಿದ್ದಾರೆ. ಕಾರವಾರದ ರಾಜಕಾರಣದಲ್ಲಿ ರೂಪಾಲಿ ನಾಯ್ಕ ಬೆಳೆದ ಬಗೆ ಸಹ ಅಚ್ಚರಿಯದ್ದೇ. ಸ್ವತಃ ಬಿಜೆಪಿಯೇ ಈಗ ರೂಪಾಲಿ ನಾಯ್ಕ ಬೆಳೆದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸುತ್ತಿದೆ.

 ಈ ಗೆಲುವು ನೀಡಿದ್ದಕ್ಕಾಗಿ ಕಾರವಾರ ಅಂಕೋಲಾ ಕ್ಷೇತ್ರದ ಜನರಿಗೆ ಋಣಿಯಾಗಿದ್ದೇನೆ. ನನ್ನ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ ಅಪಾರ ಶ್ರಮವಿದೆ. ಮೋದಿ ಅವರ ಆಶೀರ್ವಾದ ಮತ್ತು ಅಲೆ ನನ್ನ ಗೆಲುವಿನ ಹಿಂದೆ ಇದೆ. ಕ್ಷೇತ್ರದ ಅಭಿವೃದ್ಧಿಗೆ ದುಡಿಯುವೆ.
 ರೂಪಾಲಿ ನಾಯ್ಕ, ಬಿಜೆಪಿ ಅಭ್ಯರ್ಥಿ

ಜೆಡಿಎಸ್‌ ಪಕ್ಷಕ್ಕೆ ನೆಲೆಯೇ ಇಲ್ಲದ ಕಾರವಾರ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನನ್ನನ್ನು ಎರಡನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಇದು ಮತದಾರರ ತೀರ್ಮಾನ. ಹೃದಯಪೂರ್ವಕವಾಗಿ ಸ್ವಿಕರಿಸುತ್ತೇನೆ.
 ಅಸ್ನೋಟಿಕರ್‌, ಜೆಡಿಎಸ್‌ ಅಭ್ಯರ್ಥಿ

ಮತ ಮಾಹಿತಿ

ಸುನೀಲ್‌ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ, ವಿ.ಎಸ್‌. ಪಾಟೀಲ, ಸುನೀಲ ಹೆಗಡೆ ಮತ ಎಣಿಕೆ ಕೇಂದ್ರದಲ್ಲಿದ್ದು ತಮಗೆ ಯಾವ ಮತಗಟ್ಟೆಯಲ್ಲಿ ಎಷ್ಟು ಮತಗಳು ಬಂದಿವೆ ಎಂದು ಲೆಕ್ಕಚಾರದಲ್ಲಿ ತೊಡಗಿದ್ದರು. ಸೋಲಿನ ಸುಳಿವು ಖಚಿತವಾಗುತ್ತಿದ್ದಂತೆ ಸುನೀಲ ಹೆಗಡೆ,ವಿ.ಎಸ್‌. ಪಾಟೀಲ ನಿರಾಶೆಯಿಂದ ತೆರಳಿದರು. ಆನಂದ ಅಸ್ನೋಟಿಕರ್‌,ಸತೀಶ್‌ ಸೈಲ್‌ ಬೆಂಬಲಿಗರು ಮಾತ್ರ ಮತ ಎಣಿಕೆಯ ಕೇಂದ್ರದಲ್ಲಿದ್ದರು. ರೂಪಾಲಿ ಗೆಲುವು ಘೋಷಣೆಯಾಗುತ್ತಿದ್ದಂತೆ ಎಲ್ಲರೂ ಅಭಿನಂದಿಸಿದರು.

ಗೆಲುವಿಗೆ ಕಾರಣವೇನು?
ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡಿದ ಬಿಜೆಪಿ ಮಹಿಳಾ ಮತಗಳ ಮೇಲೆ ಕಣ್ಣಿಟ್ಟಿತ್ತು. ಇದು ಕ್ಲಿಕ್‌ ಸಹ ಆಯಿತು. ಹಾಲಿ ಶಾಸಕರ ವಿರುದ್ಧ ಆಡಳಿತ ವಿರೋಧಿ  ಅಲೆ ಇತ್ತು. ಮಾಜಿ ಸಚಿವ ಅಸ್ನೋಟಿಕರ್‌ ಕಾಂಗ್ರೆಸ್‌ನಿಂದ ಶಾಸಕರಾಗಿ, ಬಿಜೆಪಿಯಿಂದ ಮಂತ್ರಿಯಾಗಿ, ಅಂದಿನ ಆಡಳಿತ ಪಕ್ಷದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೀಡಿದ್ದ ಭಿನ್ನಮತದ ಶಾಕ್‌ ಜನರ ನೆನಪಿನಲ್ಲಿತ್ತು. ಕ್ಷೇತ್ರದ ಜನರು ಆನಂದ ಅಸ್ನೋಟಿಕರ್‌ ಮತ್ತು ಸತೀಶ್‌ ಸೈಲ್‌ ಆಡಳಿತದ ಶೈಲಿ ಗಮನಿಸಿದ್ದರು. 

ಸೋಲಿಗೆ ಕಾರಣವೇನು?
ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಸತೀಶ್‌ ಸೈಲ್‌ ಕೊನೆಘಳಿಗೆಯಲ್ಲಿ ಕೋಟಿ ರೂ.ಗಳ ಹಲವು ಕಾಮಗಾರಿಗಳಿಗೆ ಅಡಿಗಲ್ಲು ಹಾಕಿಸಿದ್ದರು. ಇದಕ್ಕೆ ಮುಖ್ಯಮಂತ್ರಿಗಳನ್ನೇ ಕರೆಸಿದ್ದರು. ಆದರೆ ಇದನ್ನೇ ಬುಡಮೇಲು ಮಾಡುವಲ್ಲಿ ವಿರೋಧಿ  ಪಕ್ಷಗಳು ಸಫಲವಾದವು. ಯುವಕರಿಗೆ ಉದ್ಯೋಗ ನೀಡಲು ಶಾಶ್ವತ ಕೈಗಾರಿಕೆ ತಂದಿಲ್ಲ. ಮೆಡಿಕಲ್‌ ಕಾಲೇಜು ಬಂದರೂ ಆಸ್ಪತ್ರೆ ಸೌಕರ್ಯ ಸುಧಾರಿಸಿಲ್ಲ. ನಗರದ ಒಂದು ಭಾಗದ ರಸ್ತೆ ಐದು ವರ್ಷವಾದರೂ ಡಾಂಬರು ಹಾಕಿಸಿಲ್ಲ. ಕಾಳಿ ನದಿ ಎಡ ಬಲ ದಂಡೆ ಕುಡಿಯುವ ನೀರಿನ ಕಾಮಗಾರಿಗಳು 5 ವರ್ಷದಿಂದ ನನೆಗುದಿಗೆ ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next