ಚಾಮರಾಜನಗರ: ಜಿಲ್ಲೆಯಾಗಿ 27 ವರ್ಷಗಳು ಕಳೆದರು ಸಹ ಜಿಲ್ಲಾ ಕೇಂದ್ರವು ಉತ್ತಮ ನಗರವಾಗಿ ಬೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಈ ಬಾರಿ ನಿಮ್ಮ ಒಂದು ಮತವನ್ನು ಬಿಜೆಪಿಗೆ ನೀಡಿ, ಐದು ವರ್ಷದಲ್ಲಿ ಮಾದರಿ ಚಾ.ನಗರ ನಿರ್ಮಾಣ ಮಾಡುವೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.
ಬುಧವಾರ, ನಗರದ 31 ವಾರ್ಡುಗಳಲ್ಲಿ ಪಕ್ಷದ ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಮುಖಂಡರೊಂದಿಗೆ ರೋಡ್ ಶೋ ಮೂಲಕ ಸೋಮಣ್ಣ ಮತಯಾಚನೆ ಮಾಡಿದರು. ಪ್ರಮುಖ ವೃತ್ತಗಳಲ್ಲಿ ಮತದಾರದನ್ನುದ್ದೇಶಿಸಿ ಮಾತನಾಡಿದರು. ವಾರ್ಡುಗಳು ಹಾಗೂ ಬಡಾವಣೆಗಳಲ್ಲಿ ಸೋಮಣ್ಣ ಬರುತ್ತಿದ್ದಂತೆ ನಿವಾಸಿಗಳು ಭಾರಿ ಗಾತ್ರದ ಹಾರಗಳನ್ನು ಹಾಕಿ ಸಿಹಿ ತಿನ್ನಿಸಿದರು. ರೋಡ್ ಶೋಗಳಲ್ಲಿ ಭಾಗವಹಿಸಿ, ಬಿಜೆಪಿ ಪರ ಘೋಷಣೆ ಕೂಗಿದರು.
ನಗರದಲ್ಲಿ ಜಿಲ್ಲಾಸ್ಪತ್ರೆ ಉಳಿಸಿದೆ: ನಗರದ ಹೊರ ವಲಯದಲ್ಲಿ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಾಲೇಜು ಆಸ್ಪತ್ರೆ ನಿರ್ಮಾಣದ ಬಳಿಕ, ನಗರದ ಮಧ್ಯದಲ್ಲಿದ್ದ ಜಿಲ್ಲಾಸ್ಪತ್ರೆಯನ್ನು ಅಲ್ಲಿಗೆ ಸ್ಥಳಾಂತರ ಮಾಡಲಾಗಿತ್ತು. ಇದರಿಂದ ನಗರದ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ 5-6 ಕಿ.ಮೀ. ದೂರದ ಸಿಮ್ಸ್ ಆಸ್ಪತ್ರೆಗೆ ಹೋಗ ಬೇಕಾಗಿತ್ತು. ಇಲ್ಲವೇ ಖಾಸಗಿ ಕ್ಲಿನಿಕ್‌ಗಳಿಗೆ ಹೋಗು ತ್ತಿದ್ದರು. ಈ ಸಮಸ್ಯೆ ನನ್ನ ಗಮನಕ್ಕೆ ಬರುತ್ತಿದ್ದಂತೆ ಒಂದೇ ವಾರದಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಹಿಂದಿನ ಹಳೆಯ ಕಟ್ಟಡಕ್ಕೆ ಸ್ಥಳಾಂತರ ಮಾಡಿಸಿ ಸಾವಿರಾರು ಜನರಿಗೆ ಅನುಕೂಲ ಮಾಡಿಸಿಕೊಟ್ಟಿದ್ದೇನೆ.
ಡಾ. ರಾಜ್‌ಕುಮಾರ್ ರಂಗಮಂದಿರ: ಕಳೆದ 20 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಡಾ.ರಾಜ್ ಕುಮಾರ್ ರಂಗಮಂದಿರ ಕಾಮಗಾರಿಯನ್ನು ಪೂರ್ಣಗೊಳಿಸಿ, ಉದ್ಘಾಟನೆ ಮಾಡಿಸಿದ್ದೇನೆ. ನಗರದ ನಾಗರಿಕರ ಅಪೇಕ್ಷೆಯಂತೆ ಈ ನೆಲದ ಕಲಾವಿದ ವರನಟ ಡಾ. ರಾಜ್‌ಕುಮಾರ್ ಅವರ ಹೆಸರನ್ನೂ ನಾಮಕರಣ ಮಾಡಲಾಯಿತು. ನಾಟಕ ಪ್ರದರ್ಶನ ಮಾಡಲು ತೊಂದರೆ ಅನುಭವಿಸುತ್ತಿದ್ದ ಸಾಂಸ್ಕೃತಿಕ ತಂಡಗಳಿಗೆ ರಂಗತಂಡಗಳಿಗೆ ಇದರಿಂದ ಬಹಳ ಅನುಕೂಲವಾಗಿದೆ.
ಸರ್ಕಾರಿ ಗ್ರಂಥಾಲಯಕ್ಕೆ ಹೆಚ್ಚಿನ ಅನುದಾನ: ನಗರದಲ್ಲಿ ಸರ್ಕಾರಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ನಿಗದಿತ ಅನುದಾನ ಕಡಿಮೆ ಎನಿಸಿದ್ದರಿಂದ ಅದಕ್ಕೆ ಹೆಚ್ಚು ಅನುದಾನ ನೀಡಿ ಉನ್ನತ ದರ್ಜೆಯಲ್ಲಿ ನಿರ್ಮಿಸಲು ಕ್ರಮ ವಹಿಸಿದ್ದೇನೆ ಎಂದು ತಿಳಿಸಿದರು. ವರಿಷ್ಠರ ಸೂಚನೆಯಂತೆ ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದೇನೆ. ಕಳೆದ 20 ದಿನಗಳಿಂದ ಕ್ಷೇತ್ರ ಸುತ್ತಿರುವ ನನಗೆ ಕ್ಷೇತ್ರದ ಸಂಪೂರ್ಣ ಪರಿಚಯವಾಗಿದೆ. ನಗರದ ಅನಭಿವೃದ್ಧಿಯನ್ನು ನೋಡಿದ್ದೇನೆ. ಈ ಎಲ್ಲಾ ಬದಲಾವಣೆಯನ್ನು ಮಾಡಲು ತಮ್ಮ ಒಂದು ಓಟಿಗೆ ಶಕ್ತಿ ಇದೆ. ಹೀಗಾಗಿ ಈ ಬಾರಿ ಒಂದು ಮತವನ್ನು ನೀಡಿ, ನಗರದ ಅಭಿವೃದ್ಧಿಗಾಗಿ ಈ ಬಾರಿ ಬದಲಾವಣೆ ಮಾಡಿ ಎಂದು ಮನವಿ ಮಾಡಿದರು.
ರೋಡ್ ಶೋನಲ್ಲಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಮುಖಂಡರಾದ ಕೂಡ್ಲೂರು ಹನುಮಂತಶೆಟ್ಟಿ, ನಗರ ಮಂಡಲದ ಅಧ್ಯಕ್ಷ ನಾಗರಾಜು, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಉಪಾಧ್ಯಕ್ಷೆ ಸುಧಾ, ಸದಸ್ಯರಾದ ಮಮತಾ ಬಾಲಸುಬ್ರಹ್ಮಣ್ಯ, ಗಾಯತ್ರಿ ಚಂದ್ರ ಶೇಖರ್, ನಟರಾಜು, ಶಿವರಾಜು, ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ್, ಸುದರ್ಶನಗೌಡ, ಮಂಟೇಸ್ವಾಮಿ, ಶ್ರೀನಿವಾಸಪ್ರಸಾದ್ ಇದ್ದರು.