Advertisement

ಗೋಪಾಲ್‌ ಶೆಟ್ಟಿ ಅವರಿಂದ ಉ.ಮುಂಬಯಿ ಕ್ಷೇತ್ರದಲ್ಲಿ ಪ್ರಚಾರ

12:31 PM Apr 23, 2019 | Vishnu Das |

ಮುಂಬಯಿ: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋಪಾಲ್‌ ಸಿ. ಶೆಟ್ಟಿ ಅವರು ಕ್ಷೇತ್ರಾದ್ಯಂತ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಎ. 23 ರಂದು ಬೊರಿವಲಿ ಪೂರ್ವದ ಅಶೋಕವನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಭಾಗವಹಿಸಲಿದ್ದಾರೆ.

Advertisement

ಈಗಾಗಲೇ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ 40ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಪ್ರಚಾರ ಕಾರ್ಯ ಪೂರ್ಣಗೊಂಡಿದ್ದು, ಸೋಮವಾರ ಗೋರೈ ವಾರ್ಡ್‌ನಲ್ಲಿ ಮೊದಲ ಹಂತದ ಪ್ರಚಾರ ಕಾರ್ಯ ಕೊನೆಗೊಂಡಿತು. ದಿನಂಪ್ರತಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಸಂಜೆ 5 ರಿಂದ ರಾತ್ರಿ 9 ರ ವರೆಗೆ ಸಂಸದ ಗೋಪಾಲ್‌ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಪ್ರಚಾರ ಕೈಗೊಂಡ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಗೋಪಾಲ್‌ ಶೆಟ್ಟಿ ಅವರು ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಪ್ರಚಾರ ಸಮಿತಿಯ ಹಾಗೂ ಗೋಪಾಲ್‌ ಶೆಟ್ಟಿ ತುಳು-ಕನ್ನಡಿಗ ಅಭಿಮಾನಿ ಬಳಗದ ಸಂಚಾಲಕ ಎರ್ಮಾಳ್‌ ಹರೀಶ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ಆಯಾಯ ವಾರ್ಡ್‌ಗಳ ನಗರ ಸೇವಕರು, ಬಿಜೆಪಿ ಹಾಗೂ ಶಿವಸೇನೆ, ಆರ್‌ಪಿಐ, ಭಾಸಪಾ ಪದಾಧಿಕಾರಿಗಳ ಸಹಕಾರ, ಬೆಂಬಲದೊಂದಿಗೆ ನಡೆಯುತ್ತಿರುವ ಪ್ರಚಾರ ಕಾರ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸ್ವಇಚ್ಚೆಯಿಂದ ಭಾಗವಹಿಸುತ್ತಿದ್ದು, ಪ್ರಸ್ತುತ ವರ್ಷ ಪ್ರಧಾನಿ ಮೋದಿ ಅವರ ಆನಂತರ ಅತೀ ಹೆಚ್ಚಿನ ಮತಗಳಿಂದ ಗೋಪಾಲ್‌ ಶೆಟ್ಟಿ ಅವರನ್ನು ಚುನಾಯಿಸುವ ಕನಸನ್ನು ಹೊಂದಲಾಗಿದೆ. ಎ. 23 ರಿಂದ ಪ್ರಮುಖ ವಲಯಗಳಲ್ಲಿ ಪ್ರಚಾರ ಸಮಿತಿಯ ಸಭೆಗಳನ್ನು ಆಯೋಜಿಸಲಾಗಿದ್ದು, ಆಯಾಯ ಕ್ಷೇತ್ರದ ಶಾಸಕರು, ಪಕ್ಷದ ಪ್ರಮುಖರು, ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ ಎಂದು ಎರ್ಮಾಳ್‌ ಹರೀಶ್‌ ಶೆಟ್ಟಿ ಅವರು ಅಭಿಪ್ರಾಯಿಸಿದ್ದಾರೆ.

ಬೊರಿವಲಿ ಶಾಸಕ, ರಾಜ್ಯ ಶಿಕ್ಷಣ ಸಚಿವ ವಿನೋದ್‌ ತಾಬ್ಡೆ, ದಹಿಸರ್‌ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಮನೀಷಾ ಚೌಧರಿ, ಮಾಘಾಠಾಣೆ ಶಿವಸೇನೆ ಶಾಸಕರಾದ ಪ್ರಕಾಶ್‌ ಸುರ್ವೆ, ಕಾಂದಿವಲಿ ಪೂರ್ವದ ಬಿಜೆಪಿ ಶಾಸಕ ಅತುಲ್‌ ಭಟ್‌ ಖಳ್ಕರ್‌, ಚಾರ್‌ಕೋಪ್‌ ಬಿಜೆಪಿ ಶಾಸಕ ಯೋಗೇಶ್‌ ಸಾಗರ್‌, ಎಂಎಲ್‌ಸಿಗಳಾದ ವಿಜಯ್‌ ಭೈ ಗಿರ್ಕರ್‌ ಮತ್ತು ಪ್ರವೀಣ್‌ ಧಾರೆಕಾರ್‌ ಹಾಗೂ 40 ಕ್ಕೂ ಅಧಿಕ ವಾರ್ಡ್‌ಗಳ ಮುನ್ಸಿಪಾಲ್‌ ಕಾರ್ಪೋರೇಟರ್‌ಗಳು ಗೋಪಾಲ್‌ ಶೆಟ್ಟಿ ಅವರ ಪ್ರಚಾರ ಕಾರ್ಯದಲ್ಲಿ ಈಗಾಗಲೆ ಗುರುತಿಸಿಕೊಂಡಿದ್ದು, ಎದುರಾಳಿ ಸ್ಪರ್ಧಿಯಾಗಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಾಲಿವುಡ್‌ ನಟಿ ಊರ್ಮಿಳಾ ಮಾತೊಂಡ್ಕರ್‌ ಅವರ ವಿರುದ್ಧ ಗೋಪಾಲ್‌ ಶೆಟ್ಟಿ ಅವರನ್ನು ಭರ್ಜರಿಯಾಗಿ ಜಯಗಳಿಸುವ ನಿಟ್ಟಿನಲ್ಲಿ ರಣತಂತ್ರವನ್ನು ರೂಪಿಸಲಾಗಿದೆ ಎಂದರು.

ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಲ್ಲಿ ಗೋಪಾಲ್‌ ಶೆಟ್ಟಿ ಅವರು ಮಾಡಿರುವ ಅಭಿವೃದ್ಧಿಪರ ಕಾರ್ಯಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

Advertisement

ಇನ್ನೊಂದೆಡೆ ಮೋದಿ ಅಲೆ ಗೋಪಾಲ್‌ ಶೆಟ್ಟಿ ಅವರ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರ ಗುಜರಾತಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶವಾಗಿತ್ತು. ಆದರೆ ಪ್ರಸ್ತುತ ಎಲ್ಲಾ ಭಾಷಿಗರು ಇಲ್ಲಿ ನೆಲೆಸಿದ್ದು, ವಿಶೇಷವೆಂದರೆ ತುಳು-ಕನ್ನಡಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದು ಮತ್ತು ಎಲ್ಲಾ ಭಾಷಿಗರ ಸಮಸ್ಯೆಗಳಿಗೆ ತತ್‌ಕ್ಷಣ ಸ್ಪಂದಿಸುವ ಮನೋಭಾವ ಗೋಪಾಲ್‌ ಶೆಟ್ಟಿ ಅವರಿಗೆ ವರದಾನವಾಗಲಿದೆ ಎಂದರು.

2014ರಲ್ಲಿ ಭರ್ಜರಿ ಜಯಭೇರಿ

2014ರಲ್ಲಿ ಬಿಜೆಪಿಯು ರಾಮ್‌ ನಾಯ್ಕ ಅವರ ಬದಲಾಗಿ ಗೋಪಾಲ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, 6,64,004 ಮತಗಳನ್ನು ಪಡೆದ ಗೋಪಾಲ ಶೆಟ್ಟಿ ಎದುರಾಳಿ ಕಾಂಗ್ರೆಸ್‌ನ ಸಂಜಯ್‌ ನಿರುಪಮ್‌ ಅವರಗಿಂತ 4,46,562 ಹೆಚ್ಚುವರಿ ಮತಗಳೊಂದಿಗೆ ಭರ್ಜರಿ ಜಯಭೇರಿ ಪಡೆದು ರಾಷ್ಟ್ರದ ಜನತೆ ಈ ಕ್ಷೇತ್ರದತ್ತ ಚಿತ್ತಹರಿಸುವಂತೆ ಮಾಡಿದ್ದರು. ಮಾತ್ರವಲ್ಲದೆ ಅತ್ಯಧಿಕ ಮತಗಳನ್ನು ಪಡೆದು ರಾಷ್ಟ್ರದಲ್ಲೇ ಐದನೇ
ಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲೇ ಪ್ರಥಮ ಸ್ಥಾ§ನ ಪಡೆದ ಕೀರ್ತಿಗೆ ಪಾತ್ರರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next