ಬಾಗಲಕೋಟೆ : ಬೀಳಗಿ ವಿಧಾನಸಭೆ ಕ್ಷೇತ್ರ ಹಲವು ಸಮಸ್ಯೆ ಎದುರಿಸುತ್ತಿದೆ. ಇಲ್ಲಿ ಸಂತ್ರಸ್ತರೇ ಹೆಚ್ಚಿದ್ದಾರೆ. ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಬೇಕು. ಇಡೀ ರಾಜ್ಯದಲ್ಲಿ ಬೀಳಗಿ ಕ್ಷೇತ್ರ ಬೇರೆ ವಿಷಯಗಳನ್ನು ಬಿಟ್ಟು ಅಭಿವೃದ್ಧಿ ವಿಷಯದಲ್ಲಿ ಗಮನ ಸೆಳೆಯಬೇಕು. ಇದು ನನ್ನ ಸಂಕಲ್ಪ. ಇದಕ್ಕೆ ಈ ಚುನಾವಣೆಯಲ್ಲಿ ಯಶಸ್ಸು ಸಿಗಲಿದೆ ಎಂದು ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಅವರು ‘ಉದಯವಾಣಿ’ ಜತೆ ಮಾತನಾಡಿದರು. ಬೀಳಗಿಯಲ್ಲಿ ಈಗ ಬದಲಾವಣೆಯ ಟ್ರೆಂಡ್ ಶುರುವಾಗಿದೆ. ಹೊಸ ಬೆಳಕಿಗಾಗಿ ಬೀಳಗಿ ಕಾಯುತ್ತಿದೆ. ಈ ಬದಲಾವಣೆಗಾಗಿ ಜನತೆ ತಮ್ಮನ್ನು ಬೆಂಬಲಿಸಲಿದ್ದಾರೆ. ನನ್ನ ಅಧಿಕಾರವಧಿಯಲ್ಲಿ ಜನಪರ ಯೋಜನೆಗಳಿಂದ ಅಭಿವೃದ್ಧಿಯ ದಾಪುಗಾಲು ಇಟ್ಟಿದ್ದೆ. ಸಾಧನೆಯ ಹಲವು ಪ್ರಥಮಗಳಿಗೆ ಬೀಳಗಿ ಕ್ಷೇತ್ರ ನಾಂದಿ ಹಾಡಿತ್ತು. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ಜೆ.ಟಿ.ಪಾಟೀಲ ಅವರಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ. ಪರಿಣಾಮ
ಸದ್ಯದ ಸ್ಥಿತಿಯಲ್ಲಿ ಬೀಳಗಿ ಕ್ಷೇತ್ರ ಮತ್ತೆ 10 ವರ್ಷ ಹಿಂದೆ ಉಳಿದಿದೆ. ಇದರಿಂದ ಜನ ಬೇಸತ್ತಿದ್ದಾರೆ ಎಂದು ತಿಳಿಸಿದರು.
ಪ್ರಮುಖ ಸಾಧನೆಗಳೇನು?: ಈ ಹಿಂದೆ ನನ್ನ ಅಧಿಕಾರವಧಿಯಲ್ಲಿ ಬೀಳಗಿ ಕ್ಷೇತ್ರದಾದ್ಯಂತ ದಾರಿ, ನೀರು, ನೆರಳು, ಬೆಳಕು, ಶಿಕ್ಷಣ, ಕೃಷಿ, ಆರೋಗ್ಯ, ಸಂಪರ್ಕ ಕ್ಷೇತ್ರಗಳಲ್ಲಿ ಅಮೂಲಾಗ್ರ ಸೌಕರ್ಯ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮೊದಲ ಮಿನಿ ವಿಧಾನಸೌಧ, ಉತ್ತರ ಕರ್ನಾಟಕದಲ್ಲಿ ಮೊದಲ ಹೈಟೆಕ್ ಬಸ್ ನಿಲ್ದಾಣ, ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ, ಏತನೀರಾವರಿ ಯೋಜನೆ, ಸುಸಜ್ಜಿತ ಆಸ್ಪತ್ರೆ, ವಸತಿ ಶಾಲೆಗಳು, ಪಿಯು ಕಾಲೇಜುಗಳು, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಭೂದಾನ…ಹೀಗೆ 1500 ಕೋಟಿಗೂ ಅಧಿಕ ಅನುದಾನ ತಂದು ಮಾಡಿದ ಕೆಲಸಗಳು ಕ್ಷೇತ್ರದಲ್ಲಿ ಇನ್ನೂ ಅಚ್ಚಳಿಯದೇ ಉಳಿದಿವೆ ಎಂದರು.
ಬೀಳಗಿ ಕ್ಷೇತ್ರದ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಸಮಗ್ರ ನೀರಾವರಿ ಯೋಜನೆ ರೂಪಿಸುವುದು, ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಸ್ಯೆ ಪರಿಹರಿಸುವುದು, ಅವರ ಬಂಗಾರದ ಭೂಮಿಗೆ ಯೋಗ್ಯ ಬೆಲೆ ಕೊಡಿಸುವುದು, ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಸಮರ್ಪಕಗೊಳಿಸಿ, ಶುದ್ಧ ನೀರು ಒದಗಿಸುವುದು. ಯುವ ಜನತೆಗೆ ಉದ್ಯೋಗಾವಕಾಶ ಸೃಷ್ಟಿಸುವುದು. ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿ ಜೀವನಕ್ಕೆ ಅವಕಾಶ ಮಾಡಿಕೊಡುವುದು. ಬೀಳಗಿ ನಗರವನ್ನು ಹೈಟೆಕ್ ಸಿಟಿಯನ್ನಾಗಿಸಿ ಇಡೀ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಬೆಳೆಸುವುದು ನನ್ನ ಗುರಿ ಎಂದು ತಿಳಿಸಿದರು.