ಶಿವಮೊಗ್ಗ: ನವೆಂಬರ್ 5ರಂದು ಮಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಶೋಕ್ ಗಸ್ತಿ ಅವರ ಕೆಲಸವನ್ನು ಗಮನಿಸಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದೆವು. ಆದರೆ ದುರಾದೃಷ್ಟವಶಾತ್ ಕೋವಿಡ್-19 ಸೋಂಕಿನಿಂದಾಗಿ ಅವರನ್ನು ಕಳೆದುಕೊಂಡೆವು ಎಂದರು.
ಡಿಸೆಂಬರ್ 1 ರಂದು ರಾಜಸ್ಯಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ನ.18 ಕೊನೆಯ ದಿನವಾಗಿದೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಶಿರಾ ಹಾಗೂ ಆರ್ ಆರ್ ನಗರ ಕ್ಷೇತ್ರದ ಚುನಾವಣೆಯನ್ನು ಬಿಜೆಪಿ ಸಂಘಟನಾತ್ಮಕವಾಗಿ ಎದುರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ನೋಡಿ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದೇವೆ. ಈ ಎರಡು ಕ್ಷೇತ್ರಗಳಲ್ಲಿಯೂ ನಾವು ಗೆಲುವು ಸಾಧಿಸಲಿದ್ದೇವೆ ಎಂದರು.
ಇದನ್ನೂ ಓದಿ:ಸಿಗಂದೂರು ದೇವಾಲಯ ವಿಚಾರದಲ್ಲಿ ಡಿಸಿ ಹಾಗೂ ಸರ್ಕಾರ ತಲೆಹಾಕುವುದು ಸರಿಯಲ್ಲ: ಬೇಳೂರು
ನಾಲ್ಕು ವಿಧಾನಪರಿಷತ್ ಚುನಾವಣೆಯಲ್ಲೂ ಹಿಂದೆಂದೂ ಆಗದಷ್ಟು ಮತದಾನವಾಗಿದೆ. ನಮ್ಮ ಸಂಘಟನೆ ಪ್ರಯತ್ನದಿಂದ ಈ ನಾಲ್ಕು ಕ್ಷೇತ್ರದಲ್ಲೂ ನಾವು ಗೆಲುವು ಸಾಧಿಸಲಿದ್ದೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.