ಬನಿಹಾಲ್/ಜಮ್ಮು : ಎರಡನೇ ಹಂತದ ಮುನಿಸಿಪಲ್ ಚುನಾವಣೆಗಳು ಜಮ್ಮು ಕಾಶ್ಮೀರ ದಲ್ಲಿ ಇಂದು ಜಾರಿಯಲ್ಲಿರುವ ನಡುವೆಯೆ ರಾಮಬನ ಜಿಲ್ಲೆಯ ಬಿಜೆಪಿ ಅಭ್ಯರ್ಥಿ, 62ರ ಹರೆಯದ ಆಜಾದ್ ಸಿಂಗ್ ರಾಜು ಎಂಬವರು ಮತದಾನಕ್ಕೆ ಹೋಗುತ್ತಿದ್ದಂತೆಯೇ ಹೃದಯಾಘಾತಕ್ಕೆ ಗುರಿಯಾಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ನೀರಾವರಿ ಮತ್ತು ನೆರೆ ನಿಯಂತ್ರಣ ಇಲಾಖೆಯ ಮಾಜಿ ನೌಕರ ರಾಜು ಅವರು ಮತದಾನ ಮಾಡುವ ಮುನ್ನವೇ ಮತಗಟ್ಟೆಯಲ್ಲಿ ಹೃದಯಾಘಾತಕ್ಕೆ ಗುರಿಯಾದರು. ಒಡನೆಯೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ರಾಜು ಅವರು ರಾಮಬನ ಜಿಲ್ಲೆಯ ಏಳು ಮುನಿಸಿಪಾಲಿಟಿಗಳ ಚುನಾವಣೆಗಾಗಿ ಕಣದಲ್ಲಿದ್ದ 24 ಅಭ್ಯರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.
ಜಮ್ಮು ಕಾಶ್ಮೀರಲ್ಲಿ ಇಂದು ಬುಧವಾರ 263 ಮುನಿಸಿಪಲ್ ವಾರ್ಡುಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ. ಈ ಪೈಕಿ ಜಮ್ಮು ಪ್ರಾಂತ್ಯದ ಕಿಷ್‌ತ್‌ವಾರ್, ದೋಡಾ, ರಾಮಬನ, ರಿಯಾಸಿ, ಉಧಾಂಪುರ ಮತ್ತು ಕಠುವಾ ಸೇರಿದಂತೆ ಒಟ್ಟು ಆರು ಜಿಲ್ಲೆಯಗಳ 214 ಮುನಿಸಿಪಲ್ ವಾರ್ಡುಗಳೂ ಸೇರಿವೆ.
ಮತದಾನ ಇಂದು ಬೆಳಗ್ಗೆ 6 ಗಂಟೆಗೆ ಆರಂಭವಾಗಿದ್ದು ಸಂಜೆ 4 ಗಂಟೆಗೆ ಮುಗಿಯಲಿದೆ.
ಮೊದಲ ಎರಡು ತಾಸುಗಳಲ್ಲಿ ಇಂದು ಕಠುವಾ ಜಿಲ್ಲೆಯಲ್ಲಿ ಅತ್ಯಧಿಕ ಶೇ.17.2ರ ಮತದಾನವಾಗಿದ್ದು 54,622 ಮತದಾರರ ಮತ ಚಲಾಯಿಸಿದ್ದಾರೆ.
ಉಳಿದಂತೆ ರಿಯಾಸಿ ಶೇ.16.6, ಕಿಷ್‌ತ್‌ವಾರ್ ಶೇ.15.3, ದೋಡಾ ಶೇ.12.6, ರಾಮಬನ ಶೇ.12.4, ಉಧಾಂಪುರ ಜಿಲ್ಲೆಯಲ್ಲಿ ಶೇ.10.3 ಮತದಾನ ದಾಖಲಾಗಿದೆ.