Advertisement

ರಾಷ್ಟ್ರಪತಿಗೆ ನಾವು ಭಾಷಣ ಬರೆದುಕೊಡಕ್ಕಾಗುತ್ತಾ?ಸಿಎಂ ಕಿಡಿ

04:41 PM Oct 25, 2017 | Team Udayavani |

ಬೆಂಗಳೂರು : ಟಿಪ್ಪು ಜಯಂತಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವಿನ ಸಂಘರ್ಷಕ್ಕೆ ಬುಧವಾರ ವಿಧಾನಸೌಧದ ವಜ್ರಮಹೋತ್ಸವ ನಿಮಿತ್ತ ನಡೆದ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರ ಭಾಷಣ ಹೊಸ ತಿರುವು ನೀಡಿದೆ. ರಾಷ್ಟ್ರಪತಿಗಳು ಟಿಪ್ಪು ಸುಲ್ತಾನ್‌ನನ್ನು ಸ್ವಾತಂತ್ರ್ಯವೀರ ಎಂದು ಕೊಂಡಾಗಿ ಆತನ ಕೊಡುಗೆಗಳನ್ನು ಶ್ಲಾಘಿಸಿರುವುದು ಕಾಂಗ್ರೆಸ್‌ಗೆ ಇನ್ನಷ್ಟು ಉತ್ಸಾಹ ನೀಡಿದರೆ, ಬಿಜೆಪಿಗೆ ತೀವ್ರ ಇರಿಸು ಮುರಿಸು ಉಂಟಾಗಿ ಪೇಚಿಗೆ ಸಿಲುಕುವಂತೆ ಮಾಡಿದೆ. 

Advertisement

‘ಭಾಷಣವನ್ನು ಸರ್ಕಾರ ಬರೆದುಕೊಟ್ಟು ಉದ್ದೇಶ ಪೂರ್ವಕವಾಗಿ ಟಿಪ್ಪು ಹೆಸರನ್ನು ಸೇರಿಸಿದೆ’ ಎಂಬ ಬಿಜೆಪಿ ನಾಯಕ ಆರೋಪದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿ ಕಾರಿದರು. 

‘ಅಲ್ಲಾರೀ..ರಾಷ್ಟ್ರಪತಿಗಳಿಗೆ ನಾವು ಭಾಷಣ ಬರೆದುಕೊಡಕಾಗುತ್ತಾ? ಅವರೇ ಭಾಷಣ ಸಿದ್ಧಪಡಿಸಿಕೊಂಡು ಬಂದು ಓದಿದ್ದಾರೆ. ಅವರು ಇತಿಹಾಸದಲ್ಲಿ ನಡೆದ ಸತ್ಯವನ್ನೇ ಹೇಳಿದ್ದಾರೆ. ಬಿಜೆಪಿಯವರು ಇದನ್ನು ತಿರುಚುತ್ತಿದ್ದಾರೆ. ಅವರಿಗೆ ಸುಲಭವಾಗಿ ಅರ್ಥವಾಗಲ್ಲ,ಸರ್ಕಾರ ಭಾಷಣ ಬರೆದುಕೊಡಲು ಸಾಧ್ಯವಿಲ್ಲ.ಇದು ಜಂಟಿ ಅಧಿವೇಶನದ ಭಾಷಣ ಅಲ್ಲ, ಜಂಟಿ ಅಧಿವೇಶನಕ್ಕಾದರೆ  ಸರ್ಕಾರ ಬರೆದುಕೊಡುತ್ತೆ’ ಎಂದರು.

‘ಬಿಜೆಪಿಯವರು ಈ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವುದು, ಜನರಿಗೆ ತಪ್ಪು ಮಾಹಿತಿ ನೀಡಲು ಯತ್ನಿಸುತ್ತಿರುವುದು ಅತ್ಯಂತ ಖಂಡನೀಯ ಮತ್ತು ವಿಷಾದನೀಯ’ ಎಂದು ಕಿಡಿಕಾರಿದರು. 

ರಾಷ್ಟ್ರಪತಿಗಳ ಭಾಷಣದ ವೇಳೆ ಮುಖ್ಯಮಂತ್ರಿಗಳ ಹೆಸರಿನಲ್ಲಿ ದೇವೇಗೌಡರ ಹೆಸರು ಬಿಟ್ಟ ಬಗ್ಗೆ ಕೇಳಿದಾಗ ‘ಇದರಲ್ಲಿ ನಮ್ಮ ಪಾತ್ರವೇ ಇಲ್ಲ, ನಾನಾಗಲಿ, ನನ್ನ ಆಪ್ತರಾಗಲಿ,ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಲಿ ಭಾಷಣ ಬರೆದಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಮರೆತಿರಲಿಕ್ಕಿಲ್ಲ’ ಎಂದರು. 

Advertisement

ಯಡಿಯೂರಪ್ಪಗೆ ಎಷ್ಟು ನಾಲಿಗೆ ? 
‘ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಏನು ಹೇಳಿದ್ದರು ನೆನಪಿದೆಯಾ? ಟಿಪ್ಪು ಜಯಂತಿ ಆಚರಿಸಿ ತಲೆಗೆ ಟಿಪ್ಪು ಟೋಪಿ ಧರಿಸಿ, ಖಡ್ಕ ಹಿಡಿದು ಅಲ್ಲಾಹು ಸಾಕ್ಷಿಯಾಗಿ ನಾನು ಬಿಜೆಪಿಗೆ ಹೋಗುವುದಿಲ್ಲ  ಎಂದಿದ್ದರು. ಅವರಿಗೆ ಎರಡು ನಾಲಿಗೆಯಾ, ಒಂದು ನಾಲಿಗೆಯಾ’ ಎಂದು ಲೇವಡಿ ಮಾಡಿದರು. 

ಜಗದೀಶ್‌ ಶೆಟ್ಟರ್‌ ವಿರುದ್ಧ ಕಿಡಿ ಕಾರಿ ‘ಶೇಖ್‌ ಅಲಿ ಅವರು ಟಿಪ್ಪು ಕುರಿತಾಗಿ ಬರೆದ ಪುಸ್ತಕಕ್ಕೆ ಮುನ್ನುಡಿ ಬರೆವರೇ ಶೆಟ್ಟರ್‌. ಅವರು ಯಾಕೆ ಬರೆದಿದ್ದಾರೆ ಎಂದು ಉಗುದು ಕೇಳಿ’ ಎಂದರು. 

ನೋ ಕಮೆಂಟ್ಸ್‌ ಎಂದ ಬಿಎಸ್‌ವೈ !

ರಾಷ್ಟ್ರಪತಿಗಳ ಭಾಷಣದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಸುದ್ದಿಗಾರರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪ್ರಶ್ನಿಸಿದಾಗ ‘ನೋ ಕಮೆಂಟ್ಸ್‌’ ಎಂದು ಮುಂದುವರಿದರು.

Advertisement

Udayavani is now on Telegram. Click here to join our channel and stay updated with the latest news.

Next