Advertisement

ಡಿ.ಕೆ.ಸುರೇಶ್‌ಗೆ ಪೈಪೋಟಿ ನೀಡಬಲ್ಲದೇ ಬಿಜೆಪಿ? 

07:35 AM Mar 22, 2019 | |

ರಾಮನಗರ: ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿಯ ನಡುವೆ ನೇರಹಣಾಹಣಿ ಏರ್ಪಡಲಿದೆ. ಕ್ಷೇತ್ರ ವ್ಯಾಪ್ತಿಯ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಗೌಣ ಎಂಬುದು ಮೇಲ್ನೋಟಕ್ಕೆ ಸತ್ಯವಾದರು, ಈ ಪಕ್ಷ ಗುಪ್ತಗಾಮಿನಿಯಾಗಿ ಹರಿಯುತ್ತಿದೆ ಎಂಬುದನ್ನು ವಿರೋಧ ಪಕ್ಷಗಳು ಸಹ ಒಪ್ಪುತ್ತವೆ. 

Advertisement

ಸಂಘಟನೆಯ ಶಕ್ತಿ, ಮಾಸ್‌ ಅಪೀಲ್‌ ಇರುವ ಮತ್ತು ಸಂಪನ್ಮೂಲ ಕ್ರೂಢೀಕರಿಸುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿಗೆ ಗೆಲ್ಲುವ ಅವಕಾಶಗಳಿವೆ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಸದಾ ಕೇಳಿ ಬರುವ ಮಾತು. ಏಪ್ರಿಲ್‌ 18ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ವೇಳೆಯಲ್ಲೂ ಅಂತರ್ಗಾಮಿಯಾಗಿ ಹರಿಯುತ್ತಿರುವ ಬಿಜೆಪಿಯ ವರ್ಚಸ್ಸು, ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಭುಗಿಲೇಳಲಿದೆ ಎಂದು ಬಿಜೆಪಿ ಕಾರ್ಯಕರ್ತರ ಹೇಳಿಕೆ.

ಜಿಲ್ಲೆಯಲ್ಲಿ ಬಿಜೆಪಿ ವಿಜಯ ಪತಾಕೆ: ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಮಾಗಡಿಯಿಂದ ಎಚ್‌.ಸಿ.ಬಾಲಕೃಷ್ಣ ಮತ್ತು ಚನ್ನಪಟ್ಟಣದಲ್ಲಿ ಬಿಜೆಪಿ ಟಿಕೆಟ್‌ ಮೇಲೆ ಸಿ.ಪಿ.ಯೋಗೇಶ್ವರ್‌ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಗಿಂತ ಮುನ್ನ ಇದ್ದ ಕನಕಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಎಂ.ಶ್ರೀನಿವಾಸ್‌ ಲೋಕಸಭೆ ಪ್ರವೇಶಿಸಿದ್ದರು. ಇತ್ತೀಚೆಗಷ್ಟೆ ಅವಧಿ ಮುಗಿದ ರಾಮನಗರ ನಗರಸಭೆಯಲ್ಲಿ ಇಬ್ಬರು ಸದಸ್ಯರು ಬಿಜೆಪಿ ಟಿಕೆಟ್‌ನೊಂದಿಗೆ ಆರಿಸಿ ಬಂದಿದ್ದ ಇತಿಹಾಸವಿದೆ. 

1994ರಲ್ಲಿ ಮೊದಲ ಬಾರಿಗೆ ಅರಳಿದ ಕಮಲ: ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದೆ. 1994ರ ಚುನಾವಣೆಯಲ್ಲಿ ಮಾಗಡಿಯಿಂದ ಎಚ್‌.ಸಿ.ಬಾಲಕೃಷ್ಣ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಿಳಿತ್ತು. 2011ರ ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸಿ.ಪಿ.ಯೋಗೇಶ್ವರ್‌ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದಿರು. ಜಿಲ್ಲೆಯಲ್ಲಿ ಎರಡನೇ ಬಾರಿಗೆ ಕಮಲ ಅರಳಿತ್ತು. 

ರಾಮನಗರ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಎರಡು ಬಾರಿ ಹವಾ ಎಬ್ಬಿಸಿ ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ ಮತ್ತು ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರುಗಳ ನಿದ್ದೆಗೆಡಿಸಿದ್ದ ಇತಿಹಾಸವಿದೆ. 1999ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ಗಿರಿಗೌಡ ಮತ್ತು 2008ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಂ.ರುದ್ರೇಶ್‌ ಎರಡನೇ ಸ್ಥಾನ ಪಡೆದುಕೊಂಡಿದ್ದರು. 

Advertisement

ಮೈತ್ರಿ ಅಭ್ಯರ್ಥಿ ಡಿಕೆಸು ವಿರುದ್ಧ ಅರಳುವುದೇ ಕಮಲ: ಇದೇ ಏಪ್ರಿಲ್‌ 18ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ವಿರುದ್ಧ ಕಮಲ ಅರಳವುದೇ ಎಂಬ ಕುತೂಹಲ ಸಹಜವಾಗಿ ಮತಾದರರಲ್ಲಿದೆ. ಕಾರಣ ಈ ಬಾರಿ ನೇರ ಹಣಾಹಣಿ ಏರ್ಪಟ್ಟಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆಯ ನಡಯುವೆಯೂ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೆಶ್‌ ಆರಿಸಿ ಬಂದಿದ್ದರು. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಹೆಚ್ಚು ಮತಗಳು ಲಭಿಸಿದ್ದವು.

ಮತ ಗಳಿಕೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಆರ್‌.ಪ್ರಭಾಕರ ರೆಡ್ಡಿ ಎರಡನೇ ಸ್ಥಾನದಲ್ಲಿದ್ದರು. ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಗೌಡ ಅವರು ತೃತೀಯ ಸ್ಥಾನದಲ್ಲಿದ್ದರು. ಈ ಬಾರಿಯೂ ನರೇಂದ್ರ ಮೋದಿ ಅವರ ಹವಾ ಇದ್ದೇ ಇದೆ. ಮೋದಿ ವರ್ಸಸ್‌ ಡಿ.ಕೆ.ಸುರೇಶ್‌ ಫೈಟ್‌ ಇದು ಎಂದು ಸ್ವತಃ ಬಿಜೆಪಿಯ ಮುಖಂಡರೇ ಹೇಳುತ್ತಿದ್ದಾರೆ. ಕೆಲವು ಕಾಂಗ್ರೆಸ್‌ನ ಮುಖಂಡರು ಸಹ ಈ ಮಾತು ಒಪ್ಪಿದ್ದಾರೆ. ಹೀಗಾಗಿ ಡೈರೆಕ್ಟ್ ಫೈಟ್‌ನಲ್ಲಿ ಈ ಬಾರಿ ಬಿಜೆಪಿ ಗೆದ್ದೇ ತೀರುತ್ತೆ ಎಂದು ಬಿಜೆಪಿ ಕಾರ್ಯಕರ್ತರು ಆಶಯ ವ್ಯಕ್ತಪಡಿಸಿದ್ದಾರೆ.

ಆದರೆ, ಮೋದಿ ಹವಾ ಇಲ್ಲಿ ನಡೆಯೋಲ್ಲ ಎಂದು ಮೈತ್ರಿ ಪಕ್ಷಗಳ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಹೋರಾಟ ಸಾಮಾನ್ಯ. ಆದರೆ, ಬಿಜೆಪಿ ಪಕ್ಷ ಅಂರ್ತಗಾಮಿಯಾಗಿ ಪ್ರವಹಿಸುತ್ತಿರುವ ವಿಚಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ತಿಳಿಯದ್ದೇನಲ್ಲ. ತಕ್ಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ ಪೈಪೋಟಿ ನೀಡಬಹುದು ಎಂದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಅಭ್ಯರ್ಥಿ ಮೇಲೆ ಅವಲಂಬಿತ: 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಹವಾ ಜಿಲ್ಲೆಯಲ್ಲಿ ಕಿಮ್ಮತ್ತು ಸಿಕ್ಕಿದ್ದು ಕಡಿಮೆ. ಆದರೆ, ಡಿ.ಕೆ.ಸುರೇಶ್‌ಗೆ ಸ್ಪರ್ಧೆಯೊಡ್ಡಿದ್ದು ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್‌ ಕ್ಷೇತ್ರಗಳಿವೆ. ಶೇ.60ರಷ್ಟು ನಗರ ಪ್ರದೇಶವಿದೆ.

ನಗರ ವ್ಯಾಪ್ತಿಯಲ್ಲಿ ನರೇಂದ್ರ ಮೋದಿ ಹವಾ ಹೆಚ್ಚಾಗಿದೆ. ಈ ಬಾರಿ ಬಿಜೆಪಿಗೆ ಅವಕಾಶ ಇದೆ ಎನ್ನುವವರೂ ಇದ್ದಾರೆ. ಬಿಜೆಪಿಯಿಂದ ಸಮರ್ಥ ಅಭ್ಯರ್ಥಿ ನಿಂತರೆ ಮಾತ್ರ ಮೋದಿ ಹವಾ, ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬ ಕಟು ಸತ್ಯವನ್ನು ರಾಜಕೀಯ ಮುಖಂಡರ ಅಭಿಪ್ರಾಯ. ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿಲ್ಲ. ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ಮತ್ತು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರ ಹೆಸರುಗಳು ಚಾಲ್ತಿಯಲ್ಲಿದೆ. 

* ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next