ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪ್ರಚಾರಾರ್ಥವಾಗಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಅವರ ಸ್ವಗ್ರಾಮ ಹುಲಕೋಟಿಯಲ್ಲಿ ಚುನಾವಣಾ ಬೃಹತ್ ರ್ಯಾಲಿ ನಡೆಸಿದರು.
ಹುಲಕೋಟಿ ಬಸ್ ನಿಲ್ದಾಣದಿಂದ ಸಂಜೆ 5ರ ಸುಮಾರಿಗೆ ಆರಂಭಗೊಂಡ ಬಿಜೆಪಿ ರ್ಯಾಲಿ ರಾತ್ರಿ 8ರ ವರೆಗೆ ನಡೆಯಿತು. ಕೆಲ ಗಂಟೆಗಳ ಕಾಲ ಗ್ರಾಮದ ಓಣಿ ಓಣಿಗೆ ಭೇಟಿ ನೀಡಿ, ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಚೌಕೀದಾರ್ ಪರ ಜಯಘೋಷಣೆಗಳನ್ನು ಮೊಳಗಿಸುತ್ತಾ ಮತಯಾಚಿಸಿದರು.
ಈ ನಡುವೆ ಅಲ್ಲಲ್ಲಿ ಗ್ರಾಮದ ಮಹಿಳೆಯರು, ಸಾರ್ವಜನಿಕರಿಗೆ ಬಿಜೆಪಿ ಚುನಾವಣಾ ಕರ ಪತ್ರ ತಲುಪಿಸಿದ ಅನಿಲ್ ಮೆಣಸಿನಕಾಯಿ, ಕೇಂದ್ರ ಬಿಜೆಪಿ ಸರಕಾರದ ಸಾಧನೆಗಳನ್ನು ವಿವರಿಸಿದರು. ರ್ಯಾಲಿ ಮಧ್ಯೆ ಅಲ್ಲಲ್ಲಿ ಎದುರಾದ ಗ್ರಾಮಸ್ಥರಿಗೆ ಬಿಜೆಪಿ ಕರ ಪತ್ರ ನಿಡುವುದರೊಂದಿಗೆ ಬಿಜೆಪಿ ಪ್ರಾಚಾರಕ್ಕೆ ಸಾಥ್ ನೀಡುವಂತೆ ಆಹ್ವಾನಿಸಿದರು. ಈ ವೇಳೆ ಕೆಲವರು ನಾಲ್ಕಾರು ಹೆಜ್ಜೆ ಹಾಕಿ, ತಮ್ಮ ಕಾರ್ಯಗಳತ್ತ ಮರಳಿದರು. ಅಲ್ಲದೇ, ಮನೆ ಮನೆ ಪ್ರಚಾರ ನಡೆಸಿದ ಬಿಜೆಪಿ ಕಾರ್ಯಕ ರ್ತರು ಅಲ್ಲಲ್ಲಿ ಕುಡಿಯಲು ನೀರು ಕೇಳುವೊಂದರೊಂದಿಗೆ ಗ್ರಾಮಸ್ಥರಲ್ಲಿ ಆತ್ಮೀಯತೆ ಬೆಳೆಸಲು ಪ್ರಯತ್ನಿಸಿದರು.
ಬಿಜೆಪಿ ಮುಖಂಡರಾದ ರಾಜು ಕುರಡಗಿ, ಅಶೋಕ ಸಂಕಣ್ಣವರ, ಮೋಹನ ಮಾಳಶೆಟ್ಟಿ, ರವಿ ದಂಡಿನ, ರಮೇಶ ಸಜ್ಜಗಾರ, ಭದ್ರೇಶ ಕುಸಲಾಪುರ, ಅರವಿಂದ ಹುಲ್ಲೂರ, ರಾಘವೆಂದ್ರ ಯಳವತ್ತಿ, ವಿನಾಯಕ ಮಾನ್ವಿ, ಸಿದ್ದು ಪಲ್ಲೇದ, ದ್ಯಾಮಣ್ಣ ನೀಲಗುಂದ, ತೊಟದ, ಬಸವಣ್ಣಯ್ಯ ಹಿರೇಮಠ, ಸುದೀರ ಕಾಟಿಗೇರ, ವಾಣಿ ಮೆಣಸಿನಕಾಯಿ, ಆಶ್ವಿನಿ ಜಗತಾಪ, ಶಾರದಾ ಹಿರೇಮಠ, ಜಯಶ್ರೀ ಉಗಲಾಟದ, ವಿಜಯಲಕ್ಷ್ಮೀ ಮಾನ್ವಿ ಅನೇಕರು ಇದ್ದರು.
ಬಿಗುವಿನ ವಾತಾವರಣ ರಾತ್ರಿ 8 ಗಂಟೆಗೆ ಗ್ರಾಮದಲ್ಲಿ ಪ್ರಚಾರ ಮುಗಿಸಿ ಬಿಜೆಪಿ ಕಾರ್ಯಕರ್ತರು ಹೆದ್ದಾರಿಗೆ ಮರಳುತ್ತಿದ್ದಂತೆ ಯಾರೋ ಕಿಡಿಗೇಡಿಗಳು ಬಿಜೆಪಿ ಕಾರ್ಯ ಕರ್ತರನ್ನು ಉದ್ದೇಶಿಸಿ ಅವಹೇಳನಕಾರಿ ಪದ ಬಳಸಿದರು ಎನ್ನಲಾಗಿದೆ. ಇದರಿಂದ ಕೆರಳಿದ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಇಲ್ಲಿಗೆ ಗೂಂಡಾಗಿರಿ ಮಾಡಲು ಬಂದಿಲ್ಲ. ನಿಮ್ಮ ಗೂಂಡಾಗಿರಿಯೂ ನಡೆಯಲ್ಲ. ಕಿಡಿಗೇಡಿಗಳನ್ನು ತಕ್ಷಣವೇ ಪೊಲೀಸರು ಬಂಧಿ ಸಬೇಕು ಎಂದು ಒತ್ತಾಯಿಸಿದರು. ಇದರಿಂದ ಕ್ಷಣಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಈ ವೇಳೆ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿತು ಎಂದು ತಿಳಿದು ಬಂದಿದೆ. ಹುಲಕೋಟಿಯಲ್ಲಿ ಬಿಜೆಪಿ ಪ್ರಚಾರಕ್ಕೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.