ಸೇಡಂ: ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಡಿಸಿಸಿ ಬ್ಯಾಂಕ್ ಹೆಸರಲ್ಲಿ ಬಿಜೆಪಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಹಾಪ್ ಕಾಮ್ಸ್ ನಿರ್ದೇಶಕ ಹಾಗೂ ಊಡಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ ಆರೋಪಿಸಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಬಡ್ಡಿ ರಹಿತ ಸಾಲದ ಚೆಕ್ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು. ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ನಿರ್ದೇಶಕರ ಸಲಹೆ ಹಾಗೂ ಸೂಚನೆ ಪರಿಗಣಿಸಿಯೇ, ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದ ಏರ್ಪಡಿಸಲಾಗಿತ್ತು. ಆದರೆ ತಮ್ಮ ಕಾರ್ಯಕರ್ತರಿಗೆ ಸ್ಥಳವಿಲ್ಲ ಎಂದು ತಗಾದೆ ತೆಗೆದ ಶಾಸಕ ರಾಜಕುಮಾರ ಪಾಟೀಲ ರಸ್ತೆಯಲ್ಲೇ ಕುಳಿತು ಹಿಂದಿರುಗಿದ್ದಾರೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲ. ಆದರೂ ಸಹ ರಾಜಕುಮಾರ ಪಾಟೀಲ ಪ್ರತಿಯೊಂದು ಡಿಸಿಸಿ ಬ್ಯಾಂಕ್ ಕಾರ್ಯಕ್ರಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅತಿಥಿ ಸತ್ಕಾರದ ದೃಷ್ಟಿಕೋನದಡಿ ಗ್ರಾಮಕ್ಕೆ ಬಂದ ಅವರನ್ನು ವೇದಿಕೆಗೆ ಆಗಮಿಸುವಂತೆ ಖುದ್ದಾಗಿ ತೆರಳಿ ಮನವಿ ಮಾಡಿದರೂ ಸಹ ಬರಲಿಲ್ಲ. ತಾವಿದ್ದಲ್ಲಿಯೇ, ರಸ್ತೆಯಲ್ಲೇ ಕಾರ್ಯಕ್ರಮ ಮಾಡಲು ಸೂಚಿಸಿದರು.
ರೈತರ ಕಾರ್ಯಕ್ರಮಕ್ಕೆ ಹತ್ತಾರು ವಾಹನಗಳು ಹಾಗೂ ಒಂದು ಡಿ.ಆರ್. ವ್ಯಾನ್, ಇಬ್ಬರು ಸಿಪಿಐ, ಪಿಎಸ್‌ಐ ಹಾಗೂ ಅನೇಕ ಪೊಲೀಸರ ಜೊತೆ ಬರುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು.
ಬಿಜೆಪಿ ಧ್ವಜ ಹಿಡಿದು ರ್ಯಾಲಿ ನಡೆಸಲಾಗಿದೆ. ಅದಕ್ಕೂ ನಾವು ತಕರಾರು ತೆಗೆದಿಲ್ಲ. ಗ್ರಾಮಕ್ಕೆ ಬಂದ ಅತಿಥಿಗಳಿಗೆ ಅವಮಾನಿಸುವು ಗೋಜಿಗೆ ಹೋಗಿಲ್ಲ. ರೆಡ್ ಕಾಪೆìಟ್ ಹಾಕಿ ಸ್ವಾಗತಿಸಲಾಗಿದೆ. ರಾಜಕೀಯ ದುರುದ್ದೇಶದಿಂದ ರೈತರ ಹೆಸರಲ್ಲಿ ಸಣ್ಣತನ ಪ್ರದರ್ಶಿಸಲಾಗುತ್ತಿದೆ ಎಂದು ದೂರಿದರು.
ಮುಖಂಡ ಜೈಭೀಮ ಊಡಗಿ, ಗುರುಲಿಂಗಪ್ಪ ನಂದಪನೋರ, ಸಂಪತ ಭಾಂಜಿ, ಭೀಮರಾವ್ ಅಳ್ಳೊಳ್ಳಿ, ಸೋಮಶೇಖರ ಭಾಂಜಿ, ಲಕ್ಷ್ಮೀಕಾಂತ ತೊಟ್ನಳ್ಳಿ, ರಾಜೇಂದ್ರಪ್ಪ ಸಾಹು ಅಳ್ಳೊಳ್ಳಿ, ನಾಗೇಂದ್ರಪ್ಪ ಸರಡಗಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.