Advertisement

ಪಿಡಿಪಿ-ಬಿಜೆಪಿ ಮೈತ್ರಿ ಪತನ: ಜನಹಿತ ಆಹುತಿ ಬೇಡ

06:00 AM Jun 20, 2018 | Team Udayavani |

ಮೂರುವರೆ ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದಿದ್ದ ಪಿಡಿಪಿ ಮತ್ತು ಬಿಜೆಪಿ ಜತೆಗೂಡಿ ರಚಿಸಿದ್ದ ಮೈತ್ರಿ ಸರ್ಕಾರ ಪತನವಾಗಿದೆ. ಮೂರು ವರ್ಷ ನಾಲ್ಕು ತಿಂಗಳ ಹಿಂದೆ ಸರ್ಕಾರ ರಚನೆ ಮಾಡುವ ಯತ್ನ ನಡೆದಾಗಲೇ ರಾಜಕೀಯದ ಉತ್ತರ ಮತ್ತು ದಕ್ಷಿಣ ಧ್ರುವಗಳೆಂದು ಬಿಂಬಿತವಾಗಿರುವ ಪಕ್ಷಗಳು ರಚಿಸಿದ ಸರ್ಕಾರ ಎಷ್ಟು ದಿನ ಇರಲಿದೆ ಎನ್ನುವುದು ಪ್ರಶ್ನೆಯಾಗಿತ್ತು. ಅದಕ್ಕೆ ಉತ್ತರ ಈಗ ಸಿಕ್ಕಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂಬ ಕಾರಣ ನೀಡಿ ಬಿಜೆಪಿ ಪಿಡಿಪಿಗೆ ನೀಡಿದ ಮೈತ್ರಿ ಹಿಂಪಡೆದಿದೆ. ಹೀಗಾಗಿ ಅಲ್ಲಿ ಈಗ ಸರ್ಕಾರ ಪತನವಾಗಿದೆ.

Advertisement

ಈ ರಾಜಕೀಯದಾಟದಲ್ಲಿ ಸೋತದ್ದು ಜಮ್ಮು ಮತ್ತು ಕಾಶ್ಮೀರದ ಜನತೆ. ಇತ್ತೀಚಿನ ವರ್ಷಗಳಲ್ಲಿ ಎಲ್‌ಒಸಿ ವ್ಯಾಪ್ತಿಯಲ್ಲಿ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂ ಸುತ್ತಿದೆ. ಇನ್ನೊಂದೆಡೆ ಲಷ್ಕರ್‌-ಎ-ತೊಯ್ಬಾ, ಹಿಜ್ಬುಲ್‌ ಮುಜಾಹಿದೀನ್‌ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳು ಬುಡಮೇಲು ಕೃತ್ಯ ನಡೆಸುತ್ತಾ ಬರುತ್ತಿವೆ, ಪ್ರತ್ಯೇಕತಾವಾದಿಗಳ ಅಬ್ಬರ ಮಿತಿಮೀರಿದೆ. ಇದರಿಂದಾಗಿ ಸಾಕಪ್ಪಾ ಸಾಕು ಎನ್ನುತ್ತಿರುವುದು ಕಣಿವೆ ರಾಜ್ಯದ ಜನರು.  

ವ್ಯೂಹಾತ್ಮಕ ದೃಷ್ಟಿಯಿಂದ ನೋಡುವುದಾದರೆ ಬಿಜೆಪಿಯ ನಿರ್ಧಾರ ಸರಿ.  ತೀರಾ ಇತ್ತೀಚಿನ ಘಟನೆಗಳನ್ನು ನೋಡುವುದಾದರೆ ಹಿರಿಯ ಪತ್ರಕರ್ತ ಶುಜಾತ್‌ ಬುಖಾರಿ, ಯೋಧ ಔರಂಗಜೇಬ್‌ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದು ಸೇರಿದಂತೆ ಹಲವಾರು ಉಗ್ರಗಾಮಿತ್ವದ ಚಟುವಟಿಕೆಗಳು ಮಿತಿ ಮೀರಿದ್ದವು. ಯುಪಿಎ 1 ಮತ್ತು 2 ರ ಅವಧಿಗೆ ಹೋಲಿಕೆ ಮಾಡಿದರೆ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ದಯದಿಂದ ಭಯೋತ್ಪಾದಕರ ವಿರುದ್ಧ ಕ್ರಮಕ್ಕೆ ಸೇನಾ ಪಡೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು ಎನ್ನುವುದು ಹಗಲಿನಷ್ಟೇ ಸತ್ಯ. 

ಸದ್ಯ ನ್ಯಾಷನಲ್‌ ಕಾನ್ಫರೆನ್ಸ್‌, ಕಾಂಗ್ರೆಸ್‌ ಪಿಡಿಪಿಗೆ ಬೆಂಬಲ ನೀಡಿ ಸರ್ಕಾರ ರಚನೆ ಮಾಡುವ ಇರಾದೆ ಇಲ್ಲ, ಕೂಡಲೇ ಚುನಾವಣೆ ನಡೆಯಲಿ ಎಂದು ಬಹಿರಂಗವಾಗಿಯೇ ಹೇಳಿವೆ. ಆದರೆ ಅಧಿಕಾರ ಎಂಬ ವಿಚಾರ ರಾಜಕೀಯದಲ್ಲಿ ಯಾರನ್ನೂ ಶಾಶ್ವತವಾಗಿ ದೂರ ಇರಿಸುವುದಿಲ್ಲ ಎನ್ನುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಆದರೆ ಕಣಿವೆ ರಾಜ್ಯದಲ್ಲಿ ಈ ವಾದ ಜಾರಿಯಾಗುವುದು ಕಷ್ಟ.

ಜನವರಿಯಲ್ಲಿ ಕಥುವಾದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಂದ ಘಟನೆ ಬಳಿಕ ಪಿಡಿಪಿ ಮತ್ತು ಬಿಜೆಪಿ ನಡುವೆ ಎಲ್ಲವೂ ಸುಗಮವಾಗಿರಲಿಲ್ಲ. ಸರ್ಕಾರದ ಇಬ್ಬರು ಸಚಿವರೇ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿರುವ ವ್ಯಕ್ತಿಗಳ ಪರ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವ ಹಿಸಿದ್ದರು. ಹೀಗಾಗಿ, ಬಿಜೆಪಿ ವತಿಯಿಂದ ಉಪ ಮುಖ್ಯಮಂತ್ರಿ ಸಹಿತ ಎಲ್ಲರೂ ರಾಜೀನಾಮೆ ನೀಡಿ, ಮತ್ತೆ ಹೊಸತಾಗಿ ಶಾಸಕರು ಪ್ರಮಾಣ ಸ್ವೀಕಾರ ಮಾಡಿದ್ದರು. 

Advertisement

ಈ ಪ್ರಕರಣದಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರು ಸಿಬಿಐ ಪ್ರಕರಣದ ತನಿಖೆ ನಡೆಯಬೇಕು ಎಂದು ವಾದಿಸಿದ್ದರು. ಆದರೆ ಮುಖ್ಯಮಂತ್ರಿ ಯಾಗಿದ್ದ ಮೆಹಬೂಬಾ ಮುಫ್ತಿ ಪೊಲೀಸರು ನಡೆಸಿದ ತನಿಖೆ ಸಾಕು ಎಂದಿದ್ದರು. ಇನ್ನು ಉಗ್ರ ಬುರ್ಹಾನ್‌ ವಾನಿಯನ್ನು ಸೇನಾ ಪಡೆಗಳು ಮಟ್ಟ ಹಾಕಿದ ಬಳಿಕ ರಕ್ಷಣಾ ಪಡೆಗಳ ವಿರುದ್ಧ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣಗಳಲ್ಲಿ ಬಂಧಿತರಾದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆ ಯುವಲ್ಲಿ ತನ್ನೊಂದಿಗೆ ಪಿಡಿಪಿ ಚರ್ಚೆಯನ್ನೇ ಮಾಡಿರಲಿಲ್ಲ ಎನ್ನುವುದು ಬಿಜೆಪಿ ಪ್ರತಿಪಾದನೆ. ಮೈತ್ರಿ ಸರ್ಕಾರ ಎಂದರೆ ಪ್ರಮುಖ ವಿಚಾರಗಳ ಬಗ್ಗೆ ಪಾಲುದಾರ ಪಕ್ಷದ ನಾಯಕರ ಜತೆ ಸಮಾಲೋಚನೆ ಅಗತ್ಯ.

ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ 2015ರಲ್ಲಿ ನಡೆದಿದ್ದ ಚುನಾವಣೆ ಶಾಂತಿಯುತವಾಗಿ ನಡೆಯಲು ಪಾಕಿಸ್ತಾನಕ್ಕೆ ಕೃತಜ್ಞತೆ ಸಮರ್ಪಿಸಿದ್ದರು. ಮೊದಲ ದಿನದಿಂದಲೇ ಮೈತ್ರಿ ಹಳಿತಪ್ಪಿತ್ತು. ಅದುವೇ ಮುಂದುವರಿದುಕೊಂಡು ಹೋಯಿತು ಎಂದರೆ ತಪ್ಪಲ್ಲ. ಪಿಡಿಪಿ ನಾಯಕರಾಗಿದ್ದ ದಿ. ಮುಫ್ತಿ ಮೊಹಮ್ಮದ್‌ ಸಯೀದ್‌ 2015ರಲ್ಲಿ ಮೈತ್ರಿ ಮಾತುಕತೆ ವೇಳೆ ರಾಜಕೀಯ ಕ್ಷೇತ್ರದ ಉತ್ತರ ಮತ್ತು ದಕ್ಷಿಣ ಧ್ರುವಗಳಾಗಿರುವ ಬಿಜೆಪಿ ಮತ್ತು ಪಿಡಿಪಿ ಒಂದಾಗಿವೆ ಎಂದು ಹೇಳಿದ್ದರು. ಮೂರು ವರ್ಷಗಳ ಬಳಿಕ ಅದು ಕಡಿದೂ ಹೋಗಿದೆ. 

2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಬಿಜೆಪಿ ಮೂರುವರೆ ವರ್ಷಗಳ ಹಿಂದಿನ ಮೈತ್ರಿಗೆ ತಿಲಾಂಜಲಿ ನೀಡಿದೆ ಎಂಬ ವಿಶ್ಲೇಷಣೆಗಳು ನಡೆದಿವೆ. ಹಿಂದಿನ ಚುನಾವಣೆಯಲ್ಲಿ ಜಮ್ಮು ವಲಯದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ್ದರೆ, ಕಾಶ್ಮೀರ ವಲಯದಲ್ಲಿ ಪಿಡಿಪಿ ಪಾರಮ್ಯ ಹೊಂದಿತ್ತು. ಎರಡೂ ವಲಯಗಳಲ್ಲಿ ಆಯಾ ಪಕ್ಷಗಳ ಮೇಲಿನ ವಿಶ್ವಾಸರ್ಹತೆ ಪ್ರಶ್ನಿಸುವಂತಾಗಿದೆ. 
ಅದೇನೇ ಇದ್ದರೂ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನ ಹಿತ ಎನ್ನುವುದು ಬಲಿಯಾಗಬಾರದು.

Advertisement

Udayavani is now on Telegram. Click here to join our channel and stay updated with the latest news.

Next