ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆಗಿನ ಮೈತ್ರಿಕೂಟದಿಂದ ಬಿಜೆಪಿ ಇಂದು ಮಂಗಳವಾರ ಹೊರಬಂದಿದೆ. ಈ ಹಠಾತ್ ಬೆಳವಣಿಗೆಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ; ಇದನ್ನು ಅನುಸರಿಸಿ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ.
ಬಿಜೆಪಿ ನಾಯಕ ರಾಮ ಮಾಧವ ಅವರು ಇಂದಿಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬೆಳವಣಿಗೆಯನ್ನು ದೃಢೀಕರಿಸಿದರು. “ನಾವೊಂದು ನಿರ್ಧಾರ ತೆಗೆದುಕೊಂಡಿದ್ದೇವೆ; ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜತೆಗಿನ ಮೈತ್ರಿಕೂಟದಲ್ಲಿ ಮುಂದುವರಿಯುವುದು ಅಸಾಧ್ಯವಾಗಿದೆ; ಅಂತೆಯೇ ನಾವು ಮೈತ್ರಿಕೂಟದಿಂದ ಹೊರ ಹೋಗುತ್ತಿದ್ದೇವೆ’ ಎಂದು ರಾಮ ಮಾಧವ ಹೇಳಿದರು.
ಬಿಜೆಪಿ ಮೈತ್ರಿ ಕಡಿದುಕೊಂಡ ಬಳಿಕ, ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ನರಿಂದರನಾಥ್ ವೋಹ್ರಾ ಅವರನ್ನು ಭೇಟಿಯಾದ ಮುಫ್ತಿ, ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ರೈಸಿಂಗ್ ಕಾಶ್ಮೀರದ ಮುಖ್ಯ ಸಂಪಾದಕ ಶುಜಾತ್ ಬುಖಾರಿ ಅವರ ಹತ್ಯೆಯನ್ನು ಉಲ್ಲೇಖೀಸಿ ಮಾತನಾಡಿದ ರಾಮ ಮಾಧವ ಅವರು, “ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ, ಹಿಂಸೆ ಮತ್ತು ಉಗ್ರ ಬುದ್ಧಿ ಪಲ್ಲಟ ಯತ್ನಗಳು ಹೆಚ್ಚುತ್ತಲೇ ಇದ್ದು ನಾಗರಿಕದ ಮೂಲಭೂತಹಕ್ಕುಗಳು ಅಪಾಯದಲ್ಲಿವೆ; ಶುಜಾತ್ ಬುಖಾರಿ ಅವರ ಹತ್ಯೆಯೇ ಇದಕ್ಕೊಂದು ನಿದರ್ಶನವಾಗಿದೆ’ ಎಂದು ಹೇಳಿದರು.
Related Articles
ದೇಶದ ಭದ್ರತೆ ಮತ್ತು ಅಖಂಡತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯಅಂಗವಾಗಿರುವ ಕಾರಣ ಇಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯಪಾಲರ ಕೈಗೆ ಅಧಿಕಾರ ಕೊಡುವುದೆಂದು ನಾವು ನಿರ್ಧರಿಸಿದ್ದೇವೆ’ ಎಂದು ರಾಮ ಮಾಧವ ಹೇಳಿದರು.
2014ರಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ 15 ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಇತರರು 7 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಒಟ್ಟು 87 ಸದಸ್ಯ ಬಲದ ವಿಧಾನಸಭೆಗೆ ಬಹುಮತಕ್ಕೆ ಅಗತ್ಯವಿದ್ದ 44 ಸೀಟುಗಳಿಗಾಗಿ ಬಿಜೆಪಿ-ಪಿಡಿಪಿ ಮೈತ್ರಿ ಮಾಡಿಕೊಂಡಿದ್ದವು.ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಬರೋಬ್ಬರಿ ಮೂರು ವರ್ಷಗಳ ಕಾಲ ಆಡಳಿತ ನಡೆಸಿದೆ.